ಶ್ರೀನಾರಾಯಣ ಗುರು ಅಭಿವೃದ್ಧಿ ಕೋಶ ರಚನೆ: ಗೀತಾಂಜಲಿ ಸುವರ್ಣ ಅಭಿನಂದನೆ
ಉಡುಪಿ: ಹಿಂದುಳಿದ ವರ್ಗಕ್ಕೆ ಸೇರಿದ ಈಡಿಗ,ಬಿಲ್ಲವ ಸೇರಿದಂತೆ ತತ್ಸಮಾನ ಇಪ್ಪತ್ತಾರು ಜಾತಿಗಳವ ರಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಗೊಳಿಸಲಿರುವ ರಾಜ್ಯದಲ್ಲೇ ವಿಶಿಷ್ಠವಾದ ಶ್ರೀನಾರಾಯಣ ಗುರು ಅಭಿವೃದ್ಧಿ ಕೋಶವನ್ನು ಸ್ಥಾಪಿಸಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಹಿರಿಯ ಬಿಜೆಪಿ ನಾಯಕಿ ಮತ್ತು ಬಿಲ್ಲವ ಸಮುದಾಯದ ಮಹಿಳಾ ಮುಂದಾಳು ಗೀತಾಂಜಲಿ ಎಂ.ಸುವರ್ಣ ಅಭಿನಂದಿಸಿದ್ದಾರೆ.
ಬಿಲ್ಲವ, ಈಡಿಗ ಸೇರಿದಂತೆ ತತ್ಸಮಾನ ಇಪ್ಪತ್ತಾರು ಜಾತಿಗಳವರಿಗೆ ಈಗಾಗಲೇ ಶೈಕ್ಷಣಿಕ ಹಾಗೂ ಔದ್ಯೋಗಿಕ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಕಲ್ಪಿಸಿರುವ ಬಿಜೆಪಿ ಸರಕಾರ, ನಾರಾಯಣಗುರು ವಸತಿ ಶಾಲೆ, ಕೋಟಿ- ಚೆನ್ನಯ್ಯ ಸೈನಿಕ ತರಬೇತಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ಬಿಲ್ಲವ ಸಮುದಾಯದ ಅನೇಕ ಬೇಡಿಕೆಗಳನ್ನು ಈಡೇರಿಸಿದೆ.
ಬಿಲ್ಲವ ಸಮಾಜದ ಕೆಲವೇ ಮಂದಿ ಚುನಾವಣೆ ಹತ್ತಿರವಾಗುವ ಸಂದರ್ಭದಲ್ಲಿ ಸರಕಾರವನ್ನು ವಿರೋಧಿಸಿ ನೀಡುತ್ತಿರುವ ಹೇಳಿಕೆಗಳಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ , ಬಿಲ್ಲವ ಸಮುದಾಯದ ಜನತೆ ಬುದ್ಧಿವಂತರಿದ್ದು ಬಿಜೆಪಿ ಸರಕಾರಗಳ ಅವಧಿಯಲ್ಲಿ ಸಮುದಾಯಕ್ಕಾಗಿರುವ ಲಾಭಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದು ಗೀತಾಂಜಲಿ ಎಂ.ಸುವರ್ಣ ತಿಳಿಸಿದ್ದಾರೆ.
ಸರಕಾರ ಕೊಟ್ಟಂತಹ ಈ ಒಂದು ಅಭಿವೃದ್ಧಿ ಕೋಶದಲ್ಲಿ ಧನಾತ್ಮಕವಾದ ಚಿಂತನೆಗಳಿವೆ. ಇದನ್ನು ಎಲ್ಲರೂ ಸೇರಿ ಒಳಿತನ್ನು ಮಾಡುವ ಬದಲು ಸುಮ್ಮನೆ ಇಲ್ಲ ಸಲ್ಲದ ಆರೋಪಗಳನ್ನು ಹಾಕುವುದು ಒಳಿತಲ್ಲ. ಈ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ನಮ್ಮ ಎಲ್ಲಾ ಬಿಲ್ಲವ/ಈಡಿಗ ಸಮುದಾಯದವರು ಪಡೆದುಕೊಳ್ಳ ಬೇಕು ಹಾಗು ಮುಂದೆಯೂ ಕೂಡಾ ಬಿಲ್ಲವ ಸಮುದಾಯದ ನ್ಯಾಯೋಚಿತ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸಲು ಬಿಜೆಪಿ ಪಕ್ಷ ಮತ್ತದರ ನೇತೃತ್ವದ ರಾಜ್ಯ ಸರಕಾರ ಕಟಿಬದ್ಧವಾಗಿದ್ದು ಬಿಲ್ಲವರು ಬಿಜೆಪಿ ಮತ್ತು ರಾಜ್ಯ ಸರಕಾರದ ವಿರುದ್ಧದ ಯಾವುದೇ ಷಡ್ಯಂತ್ರಗಳಲ್ಲಿ ಭಾಗಿಯಾಗಕೂಡದು ಎಂದು ಗೀತಾಂಜಲಿ ಎಂ.ಸುವರ್ಣ ಸಮಸ್ತ ಬಿಲ್ಲವ ಸಮುದಾಯವನ್ನು ವಿನಂತಿಸಿದ್ದಾರೆ.