ಮೀನುಗಾರರಿಗೆ 30 ಲಕ್ಷ ಲೀ.ಸೀಮೆಎಣ್ಣೆ ಬಿಡುಗಡೆ- ಶೋಭಾ ಕರಂದ್ಲಾಜೆ

ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿರುವ ನಾಡದೋಣಿ ಮೀನುಗಾರಿಕೆಗೆ ಹಂಚಿಕೆಯಾಗಿದ್ದ ಸೀಮೆ ಎಣ್ಣೆ ಸಕಾಲದಲ್ಲಿ ಸಿಗುತ್ತಿಲ್ಲ, ಈ ಕುರಿತು ಕೇಂದ್ರ ಸರಕಾರದ ಗಮನವನ್ನು ಸೆಳೆದು ಹಂಚಿಕೆಯಾಗಿರುವ ಸೀಮೆ ಎಣ್ಣೆಯನ್ನು ತ್ವರಿತವಾಗಿ ಬಿಡುಗಡೆ ಗೊಳಿಸಬೇಕು, ಈ ಮೂಲಕ ಕರಾವಳಿಯ ಮೀನುಗಾರರ ಹಿತವನ್ನು ಕಾಯಬೇಕು ಎಂದು ಉಡುಪಿಯ ಮೀನುಗಾರರ ಒಕ್ಕೂಟ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಶೋಭಾ ಕರಂದ್ಲಾಜೆಯವರಿಗೆ ಮನವಿಯನ್ನು ಸಲ್ಲಿಸಿತ್ತು.

ಕರಾವಳಿಯ ಮೀನುಗಾರರ ಈ ಮನವಿಯನ್ನು ಕೇಂದ್ರ ಸಚಿವರು, ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆಯವರು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವರ ಗಮನಕ್ಕೆ ತಂದು, ಅತೀ ಶೀಘ್ರದಲ್ಲಿ ಹೆಚ್ಚುವರಿ ಸೀಮೆ ಎಣ್ಣೆಯನ್ನು ಕರ್ನಾಟಕ ರಾಜ್ಯಕ್ಕೆ ಬಿಡುಗಡೆಗೊಳಿಸಿ, ಕರಾವಳಿಯ ಮೀನುಗಾರರ ಹಿತವನ್ನು ಕಾಯುವಂತೆ ಕೇಳಿಕೊಂಡಿದ್ದರು.

ಕೇಂದ್ರ ಕೃಷಿ ರಾಜ್ಯ ಸಚಿವರ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಇಂದು (ದಿನಾಂಕ 02.11.22) ಕರ್ನಾಟಕ ಸರ್ಕಾರಕ್ಕೆ 2022-23ನೇ ಪಾಲಿನ 3000KL (30.00 ಲಕ್ಷ ಲೀಟರ್) ಹೆಚ್ಚುವರಿ ಸೀಮೆ ಎಣ್ಣೆಯನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಈ ಹೆಚ್ಚುವರಿಯಾಗಿ ದೊರೆತಿರುವ ಸೀಮೆ ಎಣ್ಣೆಯನ್ನು ಮೀನುಗಾರಿಕಾ ಉದ್ದೇಶಕ್ಕೆ ರಾಜ್ಯದ ವಿತರಣಾ ವ್ಯವಸ್ಥೆಯು ವಿತರಿಸಲಿರುವುದಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕರಾವಳಿಯ ಮೀನುಗಾರರ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಿ, ನಾಡ ದೋಣಿ ಮೀನುಗಾರಿಕೆಗೆ ಅಗತ್ಯವಿರುವ ಸೀಮೆ ಎಣ್ಣೆಯನ್ನು ಬಿಡುಗಡೆ ಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಾಗೂ ಪೆಟ್ರೋಲಿಯಂ ಸಚಿವರಿಗೆ, ಉಡುಪಿ-ಚಿಕ್ಕಮಗಳೂರು ಸಂಸದೆ ಹಾಗೂ ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಧನ್ಯವಾದಗಳನ್ನು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!