ಕಲಾಂಗಣದ ಪ್ರಮುಖ ಪೋಷಕ ಫಾ. ರಮೇಶ್ ನಾಯ್ಕ್ ಬಂದೋಡ್ಕರ್ ನಿಧನ
ಮುಂಬಯಿ: ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಪ್ರವರ್ತಿತ ಕಲಾಂಗಣದ ಪ್ರಮುಖ ಪೋಷಕರಾದ ರೆ.ಫಾ. ರಮೇಶ್ ನಾಯ್ಕ್ ಬಂದೋಡ್ಕರ್ ಮುಂಬಯಿ ಡೊಕ್‌ಯಾರ್ಡ್ ಇಲ್ಲಿನ ರೋಸರಿ ಚರ್ಚಿನ ವಸತಿಗೃಹದಲ್ಲಿ ಇಂದು (01-09-2020) ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ನಾಳೆ 02-09-2020 ರಂದು ಸಂತ ಆಂಡ್ರ್ಯೂ ಚರ್ಚ್ ಬೆಂಡ್ರಾ ಇಲ್ಲಿ ಅವರ ಅಂತಿಮ ಕ್ರಿಯೆ ನಡೆಯಲಿದೆ ಎಂದು ಮುಂಬಯಿ ಆರ್ಚ್ ಡಯಾಸಿಸ್ ಪ್ರಕಟಣೆ ತಿಳಿಸಿದೆ.
1996ರಲ್ಲಿ ಕಟ್ಟಲು ಆರಂಭವಾದ ಕಲಾಂಗಣ ಕಟ್ಟಡದ ಮಹತ್ವ ಅರಿತು, ಕಲೆ ಸಂಸ್ಕೃತಿಯ ಪ್ರೇಮಿಯಾಗಿದ್ದ ಫಾ. ರಮೇಶ್ ತನ್ನ ಮಿತ್ರರಿಂದ ಧನ ಸಂಗ್ರಹ ಮಾಡಿ, ಕಟ್ಟಡ ಪೂರ್ಣಗೊಳಿಸಲು ನೆರವಾಗಿದ್ದರು. ಅವರ ಈ ಸೇವೆಯನ್ನು ಗುರುತಿಸಿ ಸಭಾಂಗಣವನ್ನು ಅವರ ತಾಯಿ ಗ್ರೇಸಿ ಗಂಗಾ ನಾಯ್ಕ್ ಬಂದೋಡ್ಕರ್ ಹೆಸರಿಗೆ ಅರ್ಪಿಸಲಾಗಿದೆ. ಅವರು ಕಲಾಂಗಣ ಕಟ್ಟಡ ಸಮಿತಿಯ ಪ್ರಧಾನ ಪೋಷಕರಾಗಿ ಹಾಗೂ ಮಾಂಡ್ ಸೊಭಾಣ್ ಕಾರ್ಯಕಾರಿ ಸಮಿತಿಯ ಪದನಿಮಿತ್ತ ಸದಸ್ಯರಾಗಿ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿದ್ದರು.
ಅವರ ನಿಧನಕ್ಕೆ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ, ಕಲಾಂಗಣ ಚೇರ್‌ಮೇನ್ ರೊನಾಲ್ಡ್ ಮೆಂಡೊನ್ಸಾ, ಮುಂಬಯಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.