ಪಡುಬಿದ್ರಿ: ಶಾಲಾ ಶಿಕ್ಷಕಿ ಆತ್ಮಹತ್ಯೆ
ಪಡುಬಿದ್ರಿ ನ.1(ಉಡುಪಿ ಟೈಮ್ಸ್ ವರದಿ): ಶಾಲಾ ಶಿಕ್ಷಕಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಸ್.ಕೋಡಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದ ಜಯಂತಿ ಎಸ್ ಗಡಿಯಾರ ಆತ್ಮಹತ್ಯೆ ಮಾಡಿಕೊಂಡವರು.
ಇವರು ಅ.19 ರಿಂದ ತಮಗೆ ವಿಪರೀತ ಮಾನಸಿಕ ಒತ್ತಡ ಆಗುತ್ತಿರುವುದಾಗಿ ತಿಳಿಸಿ ಕೆಲಸಕ್ಕೆ ಹೋಗಿರುವುದಿಲ್ಲ. ನಂತರ ಈ ಬಗ್ಗೆ ಬೆಳ್ಮಣ್ ನ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು, ಹಾಗೂ ವೈದ್ಯರ ಸಲಹೆಯಂತೆ ಸ್ಥಳ ಬದಲಾವಣೆಗಾಗಿ ಬೆಂಗಳೂರಿನಲ್ಲಿರುವ ಮಗಳ ಮನೆಗೆ ಹೋಗಿ, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ನಿನ್ನೆ ವಾಪಾಸ್ಸು ಕಾಪು ತಾಲೂಕಿನ ಹೆಜಮಾಡಿ ಗ್ರಾಮದಲ್ಲಿರುವ ಅವರ ಮನೆಗೆ ಬಂದಿದ್ದರು. ನಂತರ ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದು, ಬಳಿಕ ತಡರಾತ್ರಿ ಜಯಂತಿ ಎಸ್ ಗಡಿಯಾರ ರವರು ಮನೆಯ ಹೊರಗೆ ಇರುವ ಬಾವಿಗೆ ಹಾರಿದ್ದರು. ತಕ್ಷಣ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಮೂಲ್ಕಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಲ್ಲಿ, ಅಲ್ಲಿನ ವೈದ್ಯರು ಪರೀಕ್ಷಿಸಿ ಜಯಂತಿ ಎಸ್ ಗಡಿಯಾರ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಮೃತರ ಮಗ ರಾಧಕೃಷ್ಣ ಗಡಿಯಾರ ಅವರು ನೀಡಿದ ಮಾಹಿತಿಯಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.