ಉಡುಪಿಯ ‘ಮದರ್ ಕೇರ್’ ಸಂಸ್ಥೆ ಮಾಲಿಕ ಹೃದಯಾಘಾತದಿಂದ ನಿಧನ
ಉಡುಪಿ, ನ.1(ಉಡುಪಿ ಟೈಮ್ಸ್ ವರದಿ) ನಗರದ ಹೆಸರಾಂತ ಮಕ್ಕಳ ಆಟಿಕೆಗಳ ಮಳಿಗೆಯಾದ ಮದರ್ ಕೇರ್ ಸಂಸ್ಥೆಯ ಮಾಲಕರಾದ ಅರ್ನಾಲ್ಡ್ ಡಿಸಿಲ್ವ(70) ಹೃದಯಾಘಾತದಿಂದ ಇಂದು ಸಂಜೆ ನಿಧನರಾಗಿದ್ದಾರೆ.
ಇವರು ಇಂದು ಸಂಜೆ ಮನೆಯಲ್ಲಿರುವಾಗ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರನ್ನು ಮನೆಯವರು ಉಡುಪಿ ಮಿತ್ರ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಬಂದಿದ್ದರು, ಆದರೆ ಆಸ್ಪತ್ರೆ ತಲುಪುವ ಮುನ್ನವೇ ಇಹಲೋಕ ತ್ಯಜಿಸಿದರು ಎಂದು ವೈದ್ಯರು ತಿಳಿಸಿದ್ದಾರೆ.
ಸುಮಾರು 32 ವರ್ಷ ಗಳಿಂದ ಉಡುಪಿ ಸೂಪರ್ ಬಝಾರ್ ನ ಮದರ್ ಕೇರ್ ನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಅರ್ನಾಲ್ಡ್ ಅವರು ಕಟಪಾಡಿ ಫ್ರೆಂಡ್ಸ್, ಗೆಳೆಯರ ಬಳಗ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಮಾತ್ರವಲ್ಲದೆ ತುಳು, ಕೊಂಕಣಿ ನಾಟಕಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದರು.
ಮೃತರು ಪತ್ನಿ, ಮಗ ಮತ್ತು ಮಗಳು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.