ಮಂಗಳೂರು 67ನೇ ರಾಜ್ಯೋತ್ಸವ: ಕನ್ನಡದ ನುಡಿ ಹಬ್ಬವನ್ನು ಸದಾ ಹಸಿರಾಗಿಸಿ- ಸುನಿಲ್ ಕುಮಾರ್

ಮಂಗಳೂರು, ನ.01: ಜಿಲ್ಲಾಡಳಿತದ ವತಿಯಿಂದ ಇಲ್ಲಿನ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.

ಸಾವಿರಾರು ವರ್ಷಗಳ ಸುಧೀರ್ಘ ಪರಂಪರೆಯಲ್ಲಿ ಕನ್ನಡ ಭಾಷೆ ತನ್ನ ಸ್ವರೂಪವನ್ನು ಹಾಗೂ ಸಮಾಜವನ್ನು ಸಶಕ್ತವಾಗಿ ಬೆಳೆಸಿದೆ. ಕನ್ನಡ ಭಾಷೆ ನಮ್ಮನ್ನು ನಾಗರಿಕರನ್ನಾಗಿಸಿದೆ, ಸುಸಂಸ್ಕøತರನ್ನಾಗಿಸಿದೆ,ವಿವೇಕಿಗಳನ್ನಾಗಿಸಿದೆ. ಕನ್ನಡಿಗರು ಅತ್ಯಂತ ಸ್ನೇಹಶೀಲರಾದವರು ಹಾಗೂ ಮಾನವೀಯತೆ ಉಳ್ಳವರು, ಜ್ಞಾನಿಗಳು. ಭಾರತದ ಸುಧೀರ್ಘ ಇತಿಹಾಸದಲ್ಲಿ ಕನ್ನಡಿಗರು ಸಶಕ್ತವಾದ ಆಡಳಿತವನ್ನು ನೀಡಿದವರು. ಶಿಸ್ತುಬದ್ದವಾದ ಯೋಜನೆ, ಯೋಚನೆ, ಸೌಲಭ್ಯಗಳನ್ನು ತಮ್ಮ ಆಡಳಿತದಿಂದ ಒದಗಿಸಿದ ಪ್ರಭುತ್ವ ಕನ್ನಡಿಗರದಾಗಿತ್ತು. ವೈಜ್ಞಾನಿಕ ಮನೋಧರ್ಮ, ಸೂಕ್ಷ್ಮ ಸಂವೇದನೆ ಹೊಂದಿದ ನಮ್ಮ ಕವಿಗಳು ಹೊಸ ಬಗೆಯ ಅರಿವು, ಚಿಂತನೆಗಳನ್ನು ಕನ್ನಡ ಕಾವ್ಯಗಳಲ್ಲಿ ಸೊಗಸಾಗಿ ಅಭಿವ್ಯಕ್ತಿಸಿದ್ದಾರೆ. ಅಖಂಡ ಕರ್ನಾಟಕವನ್ನು ಕಟ್ಟಿದ ಇತಿಹಾಸವನ್ನು ಪ್ರತಿಯೊಬ್ಬರು ಅರಿಯಬೇಕಿದೆ.

ದಕ್ಷಿಣ ಭಾರತದಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷಿಗರ ಎಲ್ಲಾ ಪ್ರದೇಶಗಳನ್ನು ಒಗ್ಗೂಡಿಸಿ ಕರ್ನಾಟಕ ಏಕೀಕರಣ ಚಳವಳಿ ಮೂಲಕ 1956 ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾಯಿತು. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಹೋರಾಡಿದ ಎಲ್ಲಾ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. 1973 ನವೆಂಬರ್ 1 ರಂದು ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣ ಹೊಂದಲಾಯಿತು. ಕರ್ನಾಟಕ ಏಕೀಕರಣಕ್ಕೆ ಮನ್ನಣೆ ನೀಡಿದ ಆಲೂರು ವೆಂಕಟರಾಯರವರು, ಕೆ. ಶಿವರಾಮ ಕಾರಂತ್, ಕುವೆಂಪು, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಬಿ.ಎಂ ಶ್ರೀ ಮುಂತಾದ ಅನೇಕ ಮಹಾನೀಯರನ್ನು ಸ್ಮರಿಸುವ ಅಗತ್ಯವಿದೆ.

1799ರಲ್ಲಿ ಮೈಸೂರು ಪ್ರದೇಶವನ್ನು, 1818ರಲ್ಲಿ ಉತ್ತರ ಕರ್ನಾಟಕವನ್ನು, 1834 ರಲ್ಲಿ ಕೊಡಗು ನಾಡನ್ನು ಗೆದ್ದ ಬ್ರಿಟಿಷರು ತಮ್ಮ ಒಟ್ಟಾರೆ ಆಡಳಿತದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳನ್ನು 20 ಆಡಳಿತದ ಪ್ರದೇಶದಲ್ಲಿ ಹರಿದು ಹಂಚಿಬಿಟ್ಟರು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಒಂದೇ ಆಳ್ವಿಕೆಗೆ ಒಳಪಡಬೇಕೆಂಬ ಒತ್ತಾಯ ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಗೆ ಸಾಗಿತ್ತು.

ಕನ್ನಡದ ಪುನರುತ್ಥಾನ ಕರ್ನಾಟಕದ ಜಾಗೃತಿಗೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಅಪಾರ ಕೆಲಸ ಕಾರ್ಯಗಳು, ಹೋರಾಟಗಳು ನಿರಂತರವಾಗಿ ನಡೆದವು, ಕನ್ನಡದ ಏಕೀಕರಣಕ್ಕಾಗಿ ಅವಿರತ ದುಡಿದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ಜೊತೆ ಜೊತೆಗೆ ಎಸ್. ನಿಜಲಿಂಗಪ್ಪ, ಹಳಕಟ್ಟಿ, ಬಸವ ನಾಳ, ಸಿದ್ದಪ್ಪ ಕಂಬಳಿ, ಚಿಕ್ಕೋಡಿ ತಮ್ಮಣ್ಣಪ್ಪ, ದಿವಾಕರ, ರಾಮಕೃಷ್ಣ ಕಾರಂತ, ಶಿವರಾಮ ಕಾರಂತ, ಜಿನರಾಜ ಹೆಗಡೆ, ತಿ.ತಾ ಶರ್ಮಾ ಮೊದಲಾದ ಮಹನೀಯರ ಏಕೀಕರಣದ ಹೋರಾಟ  ಅನೂಹ್ಯ ತ್ಯಾಗದಿಂದ ಕೂಡಿತ್ತು.  ಈ ರೀತಿಯ ಸಾಂಘಿಕ ಹೋರಾಟದ ಪ್ರಯತ್ನಗಳಿಂದ ಸ್ವಾತಂತ್ರ್ಯ ಪೂರ್ವದಲ್ಲಿ 20 ಆಡಳಿತ ವಿಭಾಗದಲ್ಲಿ ಹಂಚಿಹೋಗಿದ್ದ ಕರ್ನಾಟಕ ಸ್ವಾತಂತ್ರ್ಯ ನಂತರ ಮದ್ರಾಸ್, ಮುಂಬೈ, ಕೊಡಗು, ಹೈದರಾಬಾದ್ ಮತ್ತು ಮೈಸೂರು ಹೀಗೆ ಐದು ಆಡಳಿತ ವಿಭಾಗಗಳಿಗೆ ಸೇರಿತು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕಾಸರಗೋಡಿನೊಂದಿಗೆ ಮದ್ರಾಸ್ ಸರ್ಕಾರದ ಆಡಳಿತಕ್ಕೆ ಸೇರಿ ಹೋಯಿತು. ಮತ್ತೆ ಕನ್ನಡಿಗರಿಗೆ ದೊಡ್ಡ ನಿರಾಸೆಯಾಯಿತು. ಆಡಳಿತದ ಈ ಎಲ್ಲ ಗೋಜಲುಗಳಿಂದ ಬಿಡಿಸಿಕೊಂಡು ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳು ಒಂದೇ ಆಡಳಿತಕ್ಕೆ ಸೇರಬೇಕೆನ್ನುವ ಅಖಂಡ ಕರ್ನಾಟಕದ ಹೋರಾಟ ಮತ್ತೆ ಅತಿ ದೀರ್ಘವಾಗಿ ಆರಂಭವಾಯಿತು. ಕರ್ನಾಟಕ ಏಕೀಕರಣದ ಚಳುವಳಿ ದೊಡ್ಡಮಟ್ಟದಲ್ಲಿ ನಡೆದ ನಂತರ 1956 ರಲ್ಲಿ ಮೈಸೂರು ರಾಜ್ಯ ಉದಯವಾಯಿತು. ಆದರೆ ಈ ಸಂತೋಷ ಸಂಭ್ರಮದ ನಡುವಣ ಅಪಾರ ಯಾತನೆ ಎಂದರೆ ಕನ್ನಡದ ಮುಖ್ಯ ನೆಲ, ಕನ್ನಡದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಗಳಿಗೆ ಜನ್ಮ ನೀಡಿದ ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿಹೋದದ್ದು.  ಆನಂತರ 1973ರಲ್ಲಿ ಕರ್ನಾಟಕವೆಂಬ ಹೆಸರು ಸ್ಥಿರವಾಯಿತು. ನಮ್ಮ ಕನ್ನಡ ರಾಜ್ಯೋತ್ಸವ ಹೆಮ್ಮೆಯ, ಅಭಿಮಾನದ ಆಚರಣೆಯಾಯಿತು.

ದಕ್ಷಿಣ ಕನ್ನಡ ಎಂದರೆ ಬುದ್ದಿವಂತರ ನಾಡು ಎನ್ನುವ ಮಾತು ಎಲ್ಲೆಲ್ಲೂ ಪ್ರಸಿದ್ಧ. ಕನ್ನಡ ಸಾಹಿತ್ಯದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಕವಿ ಸಾಹಿತಿಗಳ  ಕೊಡುಗೆ ಅಪೂರ್ವವಾಗಿದೆ. 16ನೇ ಶತಮಾನದಲ್ಲಿ ಕನ್ನಡದ ಶ್ರೇಷ್ಟ ಕವಿಗಳಲ್ಲಿ ಒಬ್ಬರಾದ  ಮಹಾನ್ ಕವಿ ರತ್ನಾಕರ ವರ್ಣಿ ನಮ್ಮ ದ.ಕ. ಜಿಲ್ಲೆಯ ಮೂಡಬಿದ್ರೆಯವರು ಎಂಬುವುದೇ ಅತ್ಯಂತ ಹೆಮ್ಮೆಯ ವಿಚಾರ. ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯರಾದ ರತ್ನಾಕರ ವರ್ಣಿ ಶಾಂತಿಯ ಹರಿಕಾರನಂತೆ ಶಾಂತಿ ಮಂತ್ರವನ್ನು ಸಾಹಿತ್ಯದ ಮೂಲಕ ನೀಡಿರುವುದನ್ನು ಗಮನಿಸಬೇಕಾಗಿದೆ ರತ್ನಾಕರ ವರ್ಣಿಯು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಮತ್ತು ಕನ್ನಡದ ಸೇವೆ ನಿಜಕ್ಕೂ ವರ್ಣಿಸಲು ಅಸದಳ.

ಕನ್ನಡದ ಮುಂಗೋಳಿ ಎಂದೇ ಹೆಸರಾದ ಮುದ್ದಣ,  ಕನ್ನಡದ ಮೊದಲ ಸಣ್ಣಕಥೆಗಳ ಜನಕರು, ಕಾದಂಬರಿ, ಹರಟೆ, ಸಂಶೋಧನೆ ಹಿಗೆ ಹಲವು ಮೊದಲುಗಳ ಮೂಲಕ ಕನ್ನಡಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ  ಪಂಜೆ ಮಂಗೇಶರಾಯರು, ‘ಕನ್ನಡವನುಳಿದೆನಗೆ ಅನ್ಯಜೀವನವಿಲ್ಲ, ಕನ್ನಡವೇ ಎನ್ನುಸಿರು ಪೆತ್ತೆನ್ನ ತಾಯಿ’ ಎಂದು ಹಂಬಲಿಸಿದ ಬೆನಗಲ್ ರಾಮರಾಯರು. ‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ, ಎಲ್ಲರೂ ಎದ್ದೆದ್ದು ಓಡಿ ಬನ್ನಿ, ಕನ್ನಡದ ಗಡಿ ಕಾಯೆ, ಗುಡಿ ಕಾಯೆ, ನುಡಿ ಕಾಯೆ, ಕಾಯಲಾರನೆ ಸಾಯೆ ಓ ಬನ್ನಿ ಬನ್ನಿ’ ಎಂದು ಕಾತರಿಸಿದ ಕಯ್ಯಾರ ಕಿಞ್ಞಣ್ಣ ರೈ, ತಮ್ಮ ಸಂಶೋಧನಾ ವಿದ್ವತ್ತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಪಡೆದ ಅಮೃತ ಸೋಮೇಶ್ವರ, ಕಥೆಕಾದಂಬರಿ ಲೋಕದಲ್ಲಿ ವಿಶೇಷ ಸಾಧನೆ ಮಾಡಿದ ನಿರಂಜನ, ಹಾಸ್ಯಸಾಹಿತ್ಯಕ್ಕೇ ಹೊಸ ಭಾಷ್ಯ ಬರೆದ ಭುವನೇಶ್ವರಿ ಹೆಗಡೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲರ ಕೊಡುಗೆಯಿಂದ ನಮ್ಮ ಜಿಲ್ಲೆ ಸಾಹಿತ್ಯ ಸಂಸ್ಕøತಿಯ ಶ್ರೀಮಂತ ಜಿಲ್ಲೆಯಾಗಿದೆ ಎಂದು ಹೇಳಿಕೊಳ್ಳಲು ಅಪಾರ ಅಭಿಮಾನ ಹೆಮ್ಮೆ ಎನಿಸುತ್ತದೆ.

ಆದಿಕವಿ ಪಂಪ ಭಾರತವನ್ನು ಹೇಳಿದ ಸೊಗಸು ರನ್ನನ ಧರ್ಮಪ್ರಜ್ಞೆಯ ಸೂಕ್ಷ್ಮ, ನಾಗವರ್ಮನ ಅದ್ಭುತ ಕಾವ್ಯಾಲೋಕ ಸೃಷ್ಠಿ, ಕುಮಾರ ವ್ಯಾಸನ ಕಾವ್ಯದ ವೈಭವ ಮೊದಲಾದವು ಕನ್ನಡ ಭಾಷೆಯ ಅನಂತ ಲಾಸ್ಯಗಳನ್ನು ವಿಸ್ತರಿಸಿವೆ ಈ ಎಲ್ಲಾ ರೀತಿಗಳಿಂದ ನಮ್ಮ ಭಾಷೆ ಸುಸ್ಪಷ್ಟವಾಗಿ ಬೆಳೆದಿದೆ ಎನ್ನುವ ಹೆಮ್ಮೆ ನಮ್ಮದು ಇಂತಹ ಭಾಷೆಯನ್ನು ನಾವು ಪೂರ್ಣವಾಗಿ ದಕ್ಕಿಸಿಕೊಂಡಾಗ ಮಾತ್ರ ಈ ಅಮುಲ್ಯ ಆಸ್ತಿ ನಮ್ಮದಾಗುತ್ತದೆ. ಕನ್ನಡ ಭಾಷೆ ಎಂಬುದು ಕನ್ನಡಿಗರ ಭೌಧಿಕ ಸಂಪತ್ತು. ಅದು ಎಲ್ಲಾ ಸಂಪತ್ತಿಗಿಂತಲೂ ವಿಶೇಷ. ಕನ್ನಡಿಗರು ಕನ್ನಡಿಗರಾಗಿಯೇ ಇರಬೇಕಾದ್ದು ಭಾಷೆಗಾಗಿ ಅಲ್ಲ ಅದು ತಮಗಾಗಿಯೇ. ಈ ಭೂಮಿ ಹೇಗೆ ನಮಗೆ ಅನಿವಾರ್ಯವೋ ಅಂತೇಯೆ ಬದುಕನ್ನು ಪೂರ್ಣ ರೂಪದಲ್ಲಿ ಅನುಭವಿಸಬೇಕಾದರೆ ನಮಗೆ ನಮ್ಮ ಭಾಷೆ ಅಷ್ಠೇ ಮುಖ್ಯ.

ಈ ಭಾಷೆ ಹೊರಗಿನಿಂದ ಕಲಿತ ಭಾಷೆಯಾಗಿರಬಾರದು. ಸಹಜವಾಗಿ ತನ್ನ ಪ್ರದೇಶ, ಪರಿಸರ, ಪರಂಪರೆಗಳಿಂದ ತಾನಾಗಿಯೇ ದಕ್ಕಬಹುದಾದ ತನ್ನ ಭಾಷೆ ಮಾತ್ರ ಇದನ್ನು ಸಾಧ್ಯವಾಗಿಸಬಲ್ಲದು. ಅಂತಹ ಭಾಷೆಯಲ್ಲಿ ಮಾತ್ರ ಆತ ಹೊಸ ಬಗೆಯಲ್ಲಿ ಯೋಚಿಸುವುದು, ಯೋಜಿಸುವುದು, ಅರ್ಥೈಸುವುದು, ಪ್ರಶ್ನೆಗಳನ್ನು ಗುರುತಿಸಿಕೊಳ್ಳುವುದು, ಉತ್ತರಗಳನ್ನು ಕಂಡುಕೊಳ್ಳುವುದು ಸಾಧ್ಯ. ಕನ್ನಡದ ಹಿರಿಮೆಗಳನ್ನು ಅಲೋಚಿಸುತ್ತಾ ಹೋದ ಹಾಗೆ ಕನ್ನಡದ ಭಾಗ್ಯ ಎಷ್ಟು ಅಪೂರ್ವವಾದದ್ದು ಎಂದು ಅನಿಸುತ್ತದೆ. ಈ ನಾಡಿನಲ್ಲಿ ಅನನ್ಯ ಕವಿ ಸಾಹಿತಿಗಳು ನಮ್ಮ ಸಾಂಸ್ಕøತಿಕ ಹಾದಿಯಲ್ಲಿ ಅಪೂರ್ವ ರತ್ನ ದೀಪಿಕೆಗಳ ಮೂಲಕ ಬೆಳಕನ್ನು ಚೆಲ್ಲಿ ಹೋಗಿದ್ದಾರೆ. ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರು ಅಪಾರವಾದ ಗೌರವ ಮತ್ತು ಅಭಿಮಾನವನ್ನು ಹೊಂದಬೇಕಾಗಿದೆ. ನಮ್ಮ ಸಂಸ್ಕøತಿ ಮತ್ತು ಸಾಹಿತ್ಯವನ್ನು ನಿತ್ಯ ಯುವ ಪೀಳಿಗೆಗೆ ಪರಿಚಯಿಸಬೇಕಾಗಿದೆ. ನಾಡು ನುಡಿಯ ದಿವ್ಯ ಸಾತ್ವಿಕ ಅನುಭವವನ್ನು ಆಸ್ವಾಧಿಸಿ ಆನಂದಿಸಬೇಕಾಗಿದೆ.

ಕನ್ನಡ ಶಾಲೆಗಳ ಅಭಿವೃದ್ಧಿ: ಕನ್ನಡ ಶಾಲೆಗಳಿಗೆ ಅದರಲ್ಲೂ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಕೊಡುವ ದೃಷ್ಟಿಯಿಂದ ನಮ್ಮ ಸರಕಾರ ಈ ವರ್ಷದಲ್ಲಿ ವಿಶೇಷವಾಗಿ ವಿವೇಕ ಶಾಲಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಜಿಲ್ಲೆಗೆ ಒಟ್ಟು 275 ತರಗತಿ ಕೊಠಡಿ ನಿರ್ಮಾಣಕ್ಕಾಗಿ ರೂ.39.30 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ ಹಾಗೂ ಶಾಲೆಗಳಲ್ಲಿ ಹೆಚ್ಚುವರಿ ಶೌಚಾಲಯ ನಿರ್ಮಾಣಕ್ಕಾಗಿ ರೂ. 5.00 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಅಮೃತಶಾಲೆ ಯೋಜನೆಯಡಿ 27 ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ   ರೂ. 270.00 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.

ಓದು ಕರ್ನಾಟಕ, ಓದುವ ಆಂದೋಲನ ಯೋಜನೆಯಡಿ ಅಕ್ಷರ, ಪದ, ವಾಕ್ಯ, ಕಥಾ ಹಂತದವರೆಗೆ ಮಕ್ಕಳಲ್ಲಿ ಓದುವ ಸಾಮಥ್ರ್ಯವನ್ನು ಬೆಳೆಸಲು ಒತ್ತು ನೀಡಲಾಗಿದೆ. ಈ ಸಾಮಥ್ರ್ಯವನ್ನು ಬೆಳೆಸಲು ಎಲ್ಲಾ ಶಾಲೆಗಳಿಗೂ ಓದುವ ಕಿಟ್ ವಿತರಿಸಲಾಗಿದೆ. 2022-23 ನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಣೆಯಾಗಿದ್ದು, ಒಂದರಿಂದ ಒಂಭತ್ತನೇ ತರಗತಿವರೆಗಿನ ಮಕ್ಕಳಲ್ಲಿ ಬುನಾದಿ ಅಕ್ಷರ ಜ್ಞಾನ ಮತ್ತು ಸಂಖ್ಯಾ ಜ್ಞಾನ ಬೆಳೆಸುವುದರ ಜೊತೆಗೆ ನಿಗದಿತ ಕಲಿವಿನ ಫಲಗಳನ್ನು ಬೆಳೆಸಲು ಸಾಕಷ್ಟು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಭಾಷಾಭಿವೃದ್ಧಿ, ಕೌಶಲ ಬೆಳೆಸುವಿಕೆ ಕಾರ್ಯಕ್ರಮದಡಿ ಶಾಲಾ ಹಂತದಲ್ಲಿ, ತಾಲೂಕು ಹಂತದಲ್ಲಿ ಮತ್ತು ಜಿಲ್ಲಾ ಹಂತದಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೇಗಳನ್ನು ಆಯೋಜಿಸುವ ಮೂಲಕ ಭಾಷಾಭಿವೃದ್ಧಿಗೆ ಒತ್ತನ್ನು ನೀಡಲಾಗುತ್ತಿದೆ.
ದ.ಕ ಜಿಲ್ಲಾ ಪಂಚಾಯತ್ ವತಿಯಿಂದ ಪ್ರಾರಂಭಿಕ ಹಂತದಲ್ಲಿ ಆಯ್ದ 27 ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಆರಂಭಿಸಲಾಗಿದೆ ಹಾಗೂ ಕನ್ನಡ ಮಾಧ್ಯಮ ವಿಷಯಗಳಿಗೆ ಅನುಕೂಲವಾಗುವಂತೆ ವಿಜ್ಞಾನ ಮತ್ತು ಗಣಿತ ಲ್ಯಾಬ್‍ಗಳನ್ನು ಸ್ಥಾಪಿಸಲಾಗಿದೆ.

ಗಡಿ ಪ್ರದೇಶಾಭಿವೃದ್ಧಿ: ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಯೋಜನೆಯಡಿ ನಮ್ಮ ಸರ್ಕಾರ ದ.ಕ ಜಿಲ್ಲೆಗೆ ಕಳೆದ 5 ವರ್ಷಗಳಲ್ಲಿ ರೂ. 21.00 ಕೋಟಿ ಅನುದಾನ ಬಿಡುಗಡೆಗೊಳಿಸಿದೆ ಹಾಗೂ ಕಳೆದ ಸಾಲಿನಲ್ಲಿ ರೂ.23.00 ಲಕ್ಷ ಅನುದಾನ ಬಿಡುಗಡೆಗೊಳಿಸಿದೆ ಈ ಮೂಲಕ ಗಡಿ ಪ್ರದೇಶಾಭಿವೃದ್ಧಿಗೆ ಒತ್ತು ನೀಡಲಾಗಿದೆ. ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆ ನೀಡಿದ ಕೈಯ್ಯಾರ ಕಿಂಞಣ್ಣ ರೈ ಅವರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಅಭಿಪ್ರಾಯದಿಂದ ದೂರಸರಿಯಲಿಲ್ಲ. ಕನ್ನಡ ಸಾಹಿತ್ಯಕ್ಕೆ ಹಾಗೂ ನಾಡುನುಡಿ ಅಭಿವೃದ್ಧಿಗೆ ಅತ್ಯುತ್ತಮ ಕೊಡುಗೆಯನ್ನು ಅವರು ನೀಡಿರುತ್ತಾರೆ. ಗಡಿನಾಡ ಕವಿ ಎಂದೇ ಖ್ಯಾತಿಯಾಗಿರುವ ಕೈಯ್ಯಾರ ಕಿಂಞಣ್ಣ ರೈ ಅವರ ಸ್ಮಾರಕಕ್ಕೆ ಗಡಿ ಪ್ರದೇಶಾಭಿವೃದ್ಧಿ ಯೋಜನೆಯಡಿ    ರೂ. 50.00 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ರಾಷ್ಟ್ರಕವಿ ಎಂ ಗೋವಿಂದ ಪೈ ಪುಸ್ತಕದ ಮರು ಮುದ್ರಣಕ್ಕೆ ಅನುದಾನ: ಕನ್ನಡದ ಪ್ರಪ್ರಥಮ ರಾಷ್ಟ್ರ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಗೋವಿಂದ ಪೈ ರವರ ಕೊಡುಗೆ ಅನನ್ಯವಾಗಿರುತ್ತದೆ. ಇವರ ಅಪಾರ ದೇಶಭಕ್ತಿಗೆ ಮತ್ತು ನಾಡಿನ ಮೇಲಿನ ಅಭಿಮಾನಕ್ಕೆ ತಾಯೆ ಬಾರ, ಮೊಗವ ತೋರ ಕನ್ನಡಿಗರ ಮಾತೆಯೇ ಎಂಬ ಕವಿತೆಯೇ ದೊಡ್ಡ ಉದಾಹರಣೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸಂಶೋಧನ ಲೇಖನಗಳನ್ನು ಒಟ್ಟು ಸೇರಿಸಿ ಗೋವಿಂದ ಪೈ ಸಂಶೋಧನ ಸಂಪುಟವನ್ನು 1995 ರಲ್ಲಿ ಪ್ರಕಟಿಸಿ 25 ವರ್ಷಗಳು ಸಂದಿರುತ್ತದೆ. ಪ್ರಸ್ತುತ ಪ್ರತಿಗಳು ಲಭ್ಯವಿರುವುದಿಲ್ಲದಿರುವುದರಿಂದ ಜನರಿಂದ ಬೇಡಿಕೆಗಳು ಬರುತ್ತಿದ್ದು, ಪ್ರಸ್ತುತ ಪುನರ್ ಮುದ್ರಣಕ್ಕೆ ರೂ. 30.00 ಲಕ್ಷಗಳ ಅನುದಾನ ಮಂಜೂರು ಮಾಡಲಾಗಿದೆ.

ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ: ಈ ಯೋಜನೆಯಡಿ ಸ್ವಾಮಿ ವಿವೇಕಾನಂದ ಯುವಕರ ಸ್ವಸಹಾಯ ಗುಂಪು ರಚಿಸಿ ಸ್ವ-ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಯುವಕರನ್ನು ಸ್ವಾವಲಂಭಿಯನ್ನಾಗಿಸಲು ಪ್ರೋತ್ಸಾಹಿಸಲಾಗುವುದು ಹಾಗೂ ಈ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತ್‍ಗೆ 2 ಸ್ವಸಹಾಯ ಗುಂಪುಗಳನ್ನು ರಚಿಸಿ ಪ್ರತಿ ಗುಂಪಿಗೆ ರೂ. 1.00 ಲಕ್ಷ ಸಹಾಯಧನ ಸೇರಿ ರೂ. 5.00 ಲಕ್ಷದವರೆಗೂ ಬ್ಯಾಂಕ್ ಸಾಲಸೌಲಭ್ಯ ನೀಡಲಾಗುವುದು. ದ.ಕ ಜಿಲ್ಲೆಯಲ್ಲಿ ಈಗಾಗಲೇ 45 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ.

ಸ್ತ್ರೀ ಸಾಮಥ್ರ್ಯ ಯೋಜನೆ: ಸಂಜೀವಿನಿ ಅಭಿಯಾನದಡಿ ಬಡ ಮತ್ತು ದುರ್ಬಲ ಮಹಿಳೆಯರನ್ನು ಗುರುತಿಸಿ ಆರ್ಥಿಕ ನೆರವು ನೀಡುವ ಮೂಲಕ ಪ್ರೋತ್ಸಾಹಿಸಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ತ್ರೀ ಸಾಮಥ್ರ್ಯ ಯೋಜನೆಯಡಿ ಗುಂಪುಗಳನ್ನು ರಚಿಸಿ ಈ ಗುಂಪುಗಳಿಗೆ ಉತ್ಪಾದನೆ, ಕೌಶಲ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಂಗಮಂದಿರ: ದ.ಕ ಜಿಲ್ಲೆಯಲ್ಲಿ ಬಹುದಿನಗಳಿಂದಲೂ ರಂಗಮಂದಿರಕ್ಕೆ ಸಾಕಷ್ಟು ಬೇಡಿಕೆಯಿದ್ದು, ವಿವಿಧ ಕಾರಣಗಳಿಂದ ಜಿಲ್ಲಾ ರಂಗ ಮಂದಿರವು ನೆನೆಗುದಿಗೆ ಬಿದ್ದಿದೆ ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗಿದೆ. ಈ ಬಗ್ಗೆ ಒಟ್ಟು ರೂ. 14.00 ಕೋಟಿ ವೆಚ್ಚದಲ್ಲಿ ಪರಿಷ್ಕøತ ಯೋಜನೆ ತಯಾರಿಸಲಾಗಿದೆ ಹಾಗೂ ರಂಗ ಮಂದಿರ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ.

ಕನ್ನಡಿಗರಿಗೆ ಉದ್ಯೋಗ: ಕರ್ನಾಟಕವನ್ನು ದೇಶದಲ್ಲಿ ಉತ್ಕøಷ್ಟವಾದ ಉನ್ನತ ತಂತ್ರಜ್ಞಾನದ ಕೈಗಾರಿಕಾ ರಾಜ್ಯವನ್ನಾಗಿ ಪಿಸುವ ನಿಟ್ಟಿನಲ್ಲಿ ಸರ್ಕಾರವು ಹತ್ತು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಮೂಲಕ ದೇಶದ ವಿವಿಧೆಡೆಗಳಿಂದ ಮಾತ್ರವಲ್ಲ ವಿದೇಶಗಳಿಂದಲೂ ಹೂಡಿಕೆಯನ್ನು ಆಕರ್ಷಿಸುವಲ್ಲಿ ರಾಜ್ಯ ಮುಂಚೂಣಿಯಲ್ಲಿದೆ.
ಕರ್ನಾಟಕ ರಾಜ್ಯದ ಹೊಸ ಕೈಗಾರಿಕಾ ನೀತಿ 2020-25 ಕರ್ನಾಟಕದ ಕೈಗಾರಿಕೆಗಳನ್ನು ಬಲಪಡಿಸುವುದು ಮತ್ತು ಬೆಳವಣಿಗೆಯ ಚಾಲನಾ ಶಕ್ತಿಯಾಗಿ ಪಾತ್ರನಿರ್ವಹಿಸುವುದರ ಮೇಲೆ ಕೇಂದ್ರೀಕೃತವಾಗಿದೆ ಹಾಗೂ ಅತೀ ಹೆಚ್ಚು ಉನ್ನತ ತಂತ್ರಜ್ಞಾನದ ಮೌಲ್ಯ ಮತ್ತು ಉದ್ಯೋಗಾವಕಾಶಗಳನ್ನು ಸೃಜಿಸುವ ಜವಾಬ್ದಾರಿಯನ್ನು ನಿರ್ವಹಿಸಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಉದ್ಯೋಗಾವಕಾಶ ಸಲ್ಲಿಸಿರುವ ಪ್ರಮುಖ 45 ಕೈಗಾರಿಕೆಗಳಲ್ಲಿ ಒಟ್ಟು 13,055 ಉದ್ಯೋಗಗಳಿದ್ದು, ಇದರಲ್ಲಿ 11,627 ಅಂದರೆ ಶೇ. 89% ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಲಾಗಿದೆ.
ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಇನ್ನಷ್ಟು ಹೆಚ್ಚಿನ ಬಂಡವಾಳ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ “ವಿಶ್ವ ಹೂಡಿಕೆದಾರರ ಸಮಾವೇಶವನ್ನು” ಏರ್ಪಡಿಲಾಗಿದೆ.

ಕೋಟಿ ಕಂಠ ಗಾಯನ: ಕನ್ನಡ ನಾಡು ನುಡಿಯ ಬಗ್ಗೆ ಪ್ರತಿಯೊಬ್ಬರಲ್ಲೂ ಅಭಿಮಾನವನ್ನು ಮೂಡಿಸುವ ಉದ್ದೇಶದಿಂದ ಮತ್ತು ನಮ್ಮ ನಾಡಿನ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಹಲವಾರು ಹೆಸರಾಂತ ಕವಿಗಳು ಅನೇಕ ಕವನಗಳನ್ನು ರಚಿಸಿರುತ್ತಾರೆ. ಈ ಮೂಲಕ ನಾಡುನುಡಿಯ ಬಗ್ಗೆ ಅಭಿಮಾನ ಬೆಳೆಸಲು ಅಕ್ಟೋಬರ್-28 ರಂದು ಕರ್ನಾಟಕದಾದ್ಯಂತವೇ ಅಲ್ಲ ವಿಶ್ವದಲ್ಲಿಯೇ ಏಕಕಾಲದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕೋಟ್ಯಾಂತರ ಕನ್ನಡಿಗರು ಅತ್ಯಂತ ಹೆಮ್ಮೆಯ ಭಾವದಿಂದ ಭಾಗವಹಿಸಿ ನಮ್ಮ ನಾಡಿನ ಗೌರವವನ್ನು ಹೆಚ್ಚಿಸಿರುತ್ತಾರೆ. ಇದರಂತೆ 1.50 ಕೋಟಿ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿರುತ್ತಾರೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಸಹ 12 ಲಕ್ಷ ಸಂಖ್ಯೆಯಲ್ಲಿ ಸಾರ್ವಜನಿಕರು ನೊಂದಾಯಿಸಿದ್ದು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಅತ್ಯಂತ ಮುಕ್ತಭಾವದಿಂದ ಭಾಗವಹಿಸಿದ ಎಲ್ಲರನ್ನು ಮನತುಂಬಿ ಅಭಿನಂದಿಸುತ್ತೇನೆ.
ಕನ್ನಡ ಭಾಷಾಭಿವೃದ್ಧಿ

ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಒದಗಿಸುವುದಕ್ಕಾಗಿ ಹಾಗೂ ಕನ್ನಡಿಗರಿಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸಿ ಕೊಡುವುದಕ್ಕಾಗಿ ಸರ್ಕಾರ ಇತ್ತಿಚಿಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ರನ್ನು ವಿದೇಯಕ ರೂಪದಲ್ಲಿ ಮಂಡಿಸಲಾಗಿರುತ್ತದೆ. ಇದರಂತೆ ಕನ್ನಡವನ್ನು ರಾಜ್ಯದ ಒಂದು ಅಧಿಕೃತ ಭಾಷೆಯಾಗಿ ಬಳಸಲು ಕ್ರಮವಹಿಸಲಾಗಿದೆ ಹಾಗೂ ರಾಜ್ಯ ಭಾಷಾ ಆಯೋಗವುವನ್ನು ರಚಿಸಿ ಈ ಆಯೋಗಕ್ಕೆ ಶಾಸನಬದ್ಧ ಅಧಿಕಾರವನ್ನು ನೀಡುವುದರ ಮೂಲಕ ಸದರಿ ಕನ್ನಡ ಭಾಷಾ ಸಮಗ್ರ ಅಧಿನಿಯಮವನ್ನು ಸಮರ್ಪಕವಾಗಿ ಜಾರಿಗೊಳಿಸಲು ಚಿಂತಿಸಲಾಗಿದೆ.

ನ್ಯಾಯಾಲಯಗಳಲ್ಲಿ ಕಾರ್ಯಕಲಾಪಗಳನ್ನು ಕನ್ನಡದಲ್ಲಿ ನಡೆಸಲು ಸಹ ಚಿಂತಿಸಲಾಗಿದೆ. ಕನ್ನಡ ಭಾಷೆಯ ಬಳಕೆ ಮತ್ತು ವ್ಯಾಪಕ ಪ್ರಚಾರಕ್ಕಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ವಹಿಸಲಾಗುವುದು ಅಲ್ಲದೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಬಳಕೆಯು ಸಹ ಸಮರ್ಪಕವಾಗಿ ಬಳಸಲಾಗುವುದು. ಉದ್ಯೋಗ ಪೋರ್ಟಲ್‍ನ್ನು ಅನುಷ್ಟಾನಕ್ಕೆ ತರುವ ಮೂಲಕ ರಾಜ್ಯ ಸರ್ಕಾರಿ ಕಛೇರಿ, ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರ, ಸಾರ್ವಜನಿಕ ಉದ್ದಿಮೆ, ಖಾಸಗಿ ಕೈಗಾರಿಕೆ ಇವುಗಳಲ್ಲಿನ ನೇಮಕಾತಿಯನ್ನು ಉದ್ಯೋಗ ಪೋರ್ಟಲ್‍ನ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗುವುದು. ಕೈಗಾರಿಕಾ ನೀತಿಯ ಪ್ರಕಾರ ಕನ್ನಡಿಗರಿಗೆ ಮೀಸಲಾತಿ ಒದಗಿಸುವ ಎಲ್ಲಾ ಕೈಗಾರಿಕೆಗಳು ಸಕಾರದಿಂದ ತೆರಿಗೆ ರಿಯಾಯಿತಿ ಅಥವಾ ತೆರಿಗೆ ಮುಂದೂಡಿಕೆ ಸೌಲಭ್ಯ ಪಡೆಯುವ ಹಕ್ಕನ್ನು ನೀಡಲು ಸೂಚಿಸಲಾಗಿದೆ. ಒಟ್ಟಾರೆಯಾಗಿ ಭಾರತ ಸಂವಿದಾನದ ಅವಿಚ್ಛೇಧ 345 ರ ಪ್ರಕಾರ ರಾಜ್ಯದಲ್ಲಿ ಕನ್ನಡ ಭಾಷೆಯು ಒಂದು ಅಧಿಕೃತ ಭಾಷೆಯಾಗಿದ್ದು, ಕನ್ನಡ ಭಾಷೆಯನ್ನು ಅಭಿವೃದ್ಧಿ ಪಡಿಸುವ ದೃಷ್ಠಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿಕೃತ ಕನ್ನಡ ಪರ ಚಿಂತನೆಯನ್ನು ನಡೆಸುತ್ತಿದೆ. ಆದ್ದರಿಂದ ನಮ್ಮ ಸರ್ಕಾರ ಕನ್ನಡ ಭಾಷೆಯ ಪ್ರಚಾರಕ್ಕಾಗಿ ಮತ್ತು ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿ ಹೆಜ್ಜೆಗಳನ್ನು ಹಾಕಲಿದೆ.

ಕನ್ನಡ ಬಳಕೆ: ಕನ್ನಡವನ್ನು ಬೆಳೆಸಬೇಕಾದರೆ ಅದನ್ನು ಬಳಸಬೇಕಾಗಿರುತ್ತದೆ. ಆಡಳಿತದಲ್ಲಿ ಕನ್ನಡ ಜಾರಿಗೊಳಿಸಲು ಈಗಾಗಲೇ ನಮ್ಮ ಸರಕಾರ ಪ್ರತಿಬದ್ದವಾಗಿದ್ದು, ಕನ್ನಡ ಭಾಷೆಯನ್ನು ವ್ಯಾಪಕವಾಗಿ ಬಳಸಲು ಕ್ರಮವಹಿಸಲಾಗುತ್ತಿದೆ. ಸುತ್ತೋಲೆಗಳು, ಆದೇಶಗಳು, ನೋಟಿಸ್‍ಗಳು, ಅಧಿಕೃತ ಜ್ಞಾಪನ, ಅಧಿಸೂಚನೆಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ಹೊರಡಿಸಲಾಗುತ್ತಿದೆ. ಡಾ.ಸರೋಜಿನಿ ಮಹಿಷಿ ವರದಿ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಸಮೀಕ್ಷಾ ವರದಿಯನ್ನು ವಿವಿಧ ಇಲಾಖೆಗಳು ಸರ್ಕಾರಕ್ಕೆ ಸಲ್ಲಿಸುತ್ತಿವೆ.

ಕನ್ನಡದ ಸತ್ವ, ಸೊಗಸು, ಹಿರಿಮೆಗಳನ್ನು ಎತ್ತರಕ್ಕೇರಿಸಿದ ಬಿ.ಎಂ. ಶ್ರೀ, ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ, ರನ್ನಾಧಿಯಾಗಿ ಈಗಿನ ಎಲ್ಲಾ ಆಧುನಿಕ ಕವಿಗಳ ಕನ್ನಡ ನಾಡು, ನುಡಿ, ಸಂಸ್ಕøತಿಯ ಮೇಲಿನ ಅಭಿಮಾನ ನಮ್ಮ ಆದರ್ಶವಾಗಬೇಕು. ನಮ್ಮ ಭಾಷೆಯನ್ನು ಉಳಿಸಿ ಬೆಳೆಸುತ್ತಲೇ ಇತರ ಭಾಷೆಯನ್ನು ಉಳಿಸೋಣ. ಇತರ ಭಾಷೆಯ ಪದಗಳನ್ನು ಸ್ವೀಕರಿಸುತ್ತಲೇ ಕನ್ನಡ ಭಾಷೆಯನ್ನು ಅಭಿವೃದ್ಧಿ ಮಾಡಬೇಕಾಗಿದೆ. 1973 ನವೆಂಬರ್ 1 ರಂದು ಕರ್ನಾಟಕವೆಂಬ ನಾಮಕರಣವಾದದ್ದು, ಕನ್ನಡಿಗರಾದ ನಮ್ಮ ಅಭಿಮಾನ ಸಂಕೇತ. ಕನ್ನಡಕ್ಕಾಗಿ ದುಡಿ, ಕನ್ನಡಕ್ಕಾಗಿ ಮಡಿ ಎಂಬ ಧ್ಯೇಯ ವಾಕ್ಯವನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಕನ್ನಡದ ನುಡಿ ಹಬ್ಬ (ರಾಜ್ಯೋತ್ಸವ) ವನ್ನು ಸದಾ ಹಸಿರಾಗಿಸುವ ಕೈಂಕರ್ಯದಲ್ಲಿ ಎಲ್ಲರೂ ಕೈಜೋಡಿಸೋಣ ಎಂದರು.

ಮುಖ್ಯ ಅತಿಥಿಗಳಾಗಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಯು.ಟಿ. ಖಾದರ್ ಹಾಗೂ ಉಮನಾಥ್ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಹರೀಶ್ ಕುಮಾರ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೇರಿದಂತೆ ಅಧಿಕಾರಿಗಳು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಸಾಧಕರು ಹಾಗೂ ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

Leave a Reply

Your email address will not be published. Required fields are marked *

error: Content is protected !!