ಗುಡ್ಡ ಪಾಣಾರರಿಗೆ ರಾಜ್ಯೋತ್ಸವ ಪ್ರಶಸ್ತಿ: ತುಳುನಾಡಿನ ದೈವಾರಾಧನೆಗೆ ಸಂದ ಗೌರವ- ಯಶ್ಪಾಲ್ ಸುವರ್ಣ
ಉಡುಪಿ: 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಾಡಿನ ವಿವಿಧ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಈ ಸಾಲಿನಲ್ಲಿ ಉಡುಪಿ ಜಿಲ್ಲೆಯ ಹಿರಿಯ ದೈವ ನರ್ತಕರಾದ ಗುಡ್ಡ ಪಾಣಾರರಿಗೆ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ರಾಜ್ಯ ಸರಕಾರ ತುಳುನಾಡಿನ ದೈವಾರಾಧನೆಗೆ ಗೌರವ ಸಲ್ಲಿಸಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ 38 ವರ್ಷಗಳಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಾ, ತುಳುನಾಡಿನ ಅತೀ ವಿಶಿಷ್ಟ ವಾದ ಕಾಪುವಿನಲ್ಲಿ ಪ್ರತಿ 2 ವರ್ಷಗಳಿಗೊಮ್ಮೆ ನಡೆಯುವ ಪಿಲಿ ಕೋಲದಲ್ಲಿ ದೈವ ನರ್ತನದ ಮೂಲಕ ಕರಾವಳಿಯಾದ್ಯಂತ ಗುರುತಿಸಿಕೊಂಡಿರುವ ಗುಡ್ಡ ಪಾಣಾರ ರವರನ್ನು ಪ್ರಶಸ್ತಿ ಮನೆ ಬಾಗಿಲಿಗೆ ಅರಸಿ ಬಂದಿದೆ. ಎಲೆ ಮರೆಯ ಕಾಯಿಯಂತೆ ಧರ್ಮ ನಿಷ್ಠೆಯಿಂದ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿರುವ ಗುಡ್ಡ ಪಾಣಾರರಿಗೆ ಪ್ರಶಸ್ತಿ ನೀಡುವ ಮೂಲಕ ರಾಜ್ಯೋತ್ಸವ ಪ್ರಶಸ್ತಿಗೂ ಮೌಲ್ಯ ಹೆಚ್ಚಾಗಿದೆ.
ರಾಜ್ಯ ಬಿಜೆಪಿ ಸರ್ಕಾರ ಈಗಾಲೇ 60 ವರ್ಷ ಮೇಲ್ಪಟ್ಟ ದೈವಾರಾಧಕರಿಗೆ ಮಾಸಾಶನ ನೀಡುವ ಯೋಜನೆಗೆ ಚಾಲನೆ ನೀಡಿದ್ದು, ನಮ್ಮ ನಾಡಿನ ಸನಾತನ ಸಂಸ್ಕೃತಿಯ ಕೊಂಡಿಯಾಗಿರುವ ದೈವಾರಾಧನೆಗೆ ಪ್ರೋತ್ಸಾಹ ನೀಡುವ ಸರಕಾರದ ನಡೆ ಶ್ಲಾಘನೀಯವಾಗಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಪದ್ಮ ಪ್ರಶಸ್ತಿಗಳನ್ನು ಅರ್ಹತೆಯ ಮೇರೆಗೆ ಸಮಾಜದಲ್ಲಿ ಅಪ್ರತಿಮ ಸಾಧನೆಗೈದ ಸಾಮಾನ್ಯ ವ್ಯಕ್ತಿಗಳನ್ನು ಅರಸಿ ಬಂದಂತೆ, ಇದೀಗ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ವಿಶೇಷ ಮುತುವರ್ಜಿಯಿಂದ ಅರ್ಹ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.