ಉಡುಪಿ: ಮಹಿಳೆಯ ಚಿನ್ನದ ಸರ ಸುಲಿಗೆಗೈದ ಸರಗಳ್ಳನ ಬಂಧನ
ಉಡುಪಿ: ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬಳಿ ಅ.3ರಂದು ನಡೆದ ಮಹಿಳೆಯೊಬ್ಬರ ಚಿನ್ನದ ಸರ ಸುಲಿಗೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ರಾಜ್ಯ ಸರಗಳ್ಳನನ್ನು ಉಡುಪಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ದಾಂಡೇಲಿ ಪಟೇಲ್ ನಗರದ ನಿವಾಸಿ ಮೌಲಾಲಿ ಜಮಾದಾರ್ ಬಂಧಿತ ಆರೋಪಿ. ಈತ ಅ.3ರಂದು ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆದ ಚಂಡಿಕಾಯಾಗದಲ್ಲಿ ಪಾಲ್ಗೊಂಡು ವಾಪಾಸು ಮನೆಗೆ ಹೋಗುತ್ತಿದ್ದ ಕುಂಜಿಬೆಟ್ಟು ನಿವಾಸಿ ಪ್ರೇಮಾ ಶೇಣವ ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆಗೈದು ಪರಾರಿಯಾಗಿದ್ದನು. ತನಿಖೆಗಿಳಿದ ಉಡುಪಿ ನಗರ ಠಾಣೆಯ ಪೊಲೀಸರು ಲಭ್ಯ ಸಿಸಿಟಿವಿ ಫೂಟೇಜ್ಗಳು ಹಾಗೂ ಮೊಬೈಲ್ ಕರೆ ವಿವರಗಳನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.
ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನದ ಸರವನ್ನು ಧಾರವಾಡದ ಟೋಲ್ ನಾಕಾದ ಗೋಲ್ಡ್ ಶಾಪ್ವೊಂದರಲ್ಲಿ ಮಾರಾಟ ಮಾಡಿರುವುದು ತಿಳಿದುಬಂದಿದೆ. ಆರೋಪಿ ಮಾರಾಟ ಮಾಡಿದ್ದ ಅಂದಾಜು 3 ಲಕ್ಷ ರೂ. ಮೌಲ್ಯದ 63 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೌಲಾಲಿ ಜಮಾದಾರ್ನ ವಿರುದ್ಧ ದಾಂಡೇಲಿ ಗ್ರಾಮಾಂತರ ಠಾಣೆ. ಬಾಗಲಕೋಟೆ ಜಿಲ್ಲೆಯ ಕಲಾದಗಿ ಪೊಲೀಸ್ ಠಾಣೆ, ಧಾರವಾಡ ನಗರದ ಅಳ್ನಾವರ ಪೊಲೀಸ್ ಠಾಣೆ ಹಾಗೂ ಗೋವಾ ರಾಜ್ಯದ ಮಡಗಾಂವ್ ಮತ್ತು ಪೋಂಡಾ ಪೊಲೀಸ್ ಠಾಣೆಗಳಲ್ಲಿ ಹಲವು ಕಳವು ಪ್ರಕರಣಗಳು ದಾಖಲಾಗಿದ್ದು, ಬಂಧನಕ್ಕೆ ಒಳಗಾಗಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡಿದ್ದನು.