ಬ್ರಹ್ಮಾವರ ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
ಉಡುಪಿ: ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬ್ರಹ್ಮಾವರ ಮದರ್ ಪ್ಯಾಲೇಸ್ ನಲ್ಲಿ ಇಂದು ಮುಂಜಾನೆ 3ಗಂಟೆಗೆ ನಡೆದಿದೆ.
ತೆಲಂಗಾಣ ರಾಜ್ಯದ ಸಿದ್ದಿಪೇಟ ಜಿಲ್ಲೆಯ ಸಿದ್ದಿಪೇಟ ನಿವಾಸಿ 61ವರ್ಷದ ವಿ. ಶ್ರೀನಿವಾಸ ಮೃತದುರ್ದೈವಿ. ಇವರು ಅ.26ರಂದು ಮಗ ಮೋಹನ ಕುಮಾರ್, ಪತ್ನಿ, ಮಗನ ಹೆಂಡತಿ, ಮಗುವಿನೊಂದಿಗೆ ಉಡುಪಿ ಜಿಲ್ಲೆ ಪ್ರವಾಸಕ್ಕೆ ಬಂದಿದ್ದರು. ಅ.27ರಂದು ಕೊಲ್ಲೂರು ದೇವರ ದರ್ಶನ ಮುಗಿಸಿಕೊಂಡು, ವಿಶ್ರಾಂತಿ ಪಡೆಯಲು ಬ್ರಹ್ಮಾವರ ಮದರ್ ಪ್ಯಾಲೇಸ್ ಗೆ ಬಂದು ತಂಗಿದ್ದರು. ಇಂದು ಬೆಳಗ್ಗಿನ ಜಾವ 3:10ಕ್ಕೆ ವಿ.ಶ್ರೀನಿವಾಸ ಅವರಿಗೆ ಜ್ವರ ಹಾಗೂ ಉಸಿರಾಟದ ತೊಂದರೆವುಂಟಾಗಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈಧ್ಯರು ಶ್ರೀನಿವಾಸ ರವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ಧಾರೆ.
ಶ್ರೀನಿವಾಸ್ ಅವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಅದೇ ಕಾರಣದಿಂದ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.