ಪತ್ನಿಯ ಆತ್ಮಹತ್ಯೆಯನ್ನು ತಡೆಯದೇ‌ ಚಿತ್ರೀಕರಣ ಮಾಡಿದ ಪತಿರಾಯ

ಕಾನ್ಪುರ: ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಆಕೆಯನ್ನು ತಡೆಯದೇ‌ ಆತ್ಮಹತ್ಯೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿರುವ ಆಘಾತಕಾರಿ ಘಟನೆ ಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.   

ಕಾನ್ಪುರದ ಶೋಬಿತಾ ಗುಪ್ತಾ ಆತ್ಮಹತ್ಯೆ ಮಾಡಿಕೊಂಡವರು.

ಐದು ವರ್ಷಗಳ ಹಿಂದೆ ವಿವಾಹವಾಗಿದ್ದ ಶೋಬಿತಾ ಗುಪ್ತಾ ಮಂಗಳವಾರ ಪತಿಯೊಂದಿಗೆ ಜಗಳ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪತಿಯ ವಿಚಾರಣೆ ವೇಳೆ ತಿಳಿದು ಬಂದಿದೆ. 

ಈ ಬಗ್ಗೆ ಶೋಬಿತಾ ಅವರ ತಂದೆ ರಾಜ್ ಕಿಶೋರ್ ಗುಪ್ತಾ ಪ್ರತಿಕ್ರಿಯೆ ನೀಡಿ, ಮಧ್ಯಾಹ್ನ 12.30ಕ್ಕೆ ಈ ಘಟನೆ ನಡೆದಿದೆ. 

ಪುತ್ರಿ ಶೋಬಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾನು ಅಳಿಯನಿಂದ ಮಂಗಳವಾರ ಅಪರಾಹ್ನ ಕರೆ ಸ್ವೀಕರಿಸಿದೆ. ನಾವು ಮನೆಗೆ ಬಂದಾಗ ಆಕೆಯ ಮೃತದೇಹ ಬೆಡ್ ಮೇಲಿತ್ತು. ಅಳಿಯ ಎದೆ ಒತ್ತುವ ಮೂಲಕ ಶ್ವಾಸಕೋಶ ಕಾರ್ಯ ನಿರ್ವಹಿಸುವಂತೆ ಮಾಡುತ್ತಿದ್ದ. ಅಲ್ಲದೆ ಈ ಹಿಂದೆ ಕೂಡ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು ಎಂದು ಹೇಳಿ ವೀಡಿಯೊ ತೋರಿಸಿದ. ಆದರೆ, ಆಕೆಯನ್ನು ತಡೆದಿಲ್ಲ, ಬದಲಾಗಿ ವೀಡಿಯೊ ಮಾಡಿದ್ದಾನೆ. ಸ್ಪಲ್ಪ ಸಮಯದ ಬಳಿಕ ಆಕೆ ಮೃತಪಟ್ಟಿರುವುದು ಅನುಮಾನ ಮೂಡಿಸಿದೆ’’ ಎಂದು ಅವರು ಹೇಳಿದ್ದಾರೆ. 

ಹಾಗೂ ಶೋಬಿತಾಳನ್ನು ಆಕೆಯ ಕುಟುಂಬ ಆಸ್ಪತ್ರೆಗೆ ಕರೆದೊಯ್ದಿದೆ. ಆದರೆ, ಅಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ‘‘ತನ್ನ ಪುತ್ರಿಯನ್ನು ರಕ್ಷಿಸಬಹುದಿತ್ತು. ಆದರೆ, ನನ್ನ ಅಳಿಯ ಅದನ್ನು ಮಾಡಲಿಲ್ಲ. ನಮಗೆ ನ್ಯಾಯ ಬೇಕು’’ ಎಂದು ಕುಟುಂಬ ಆಗ್ರಹಿಸಿದೆ. 

ಇನ್ನು ಪತಿ ಸಂಜಯ್ ಗುಪ್ತಾ ಚಿತ್ರೀಕರಿಸಿದ ಮೊಬೈಲ್ ವೀಡಿಯೊದಲ್ಲಿ ಶೋಬಿತಾ ಗುಪ್ತಾ ಬೆಡ್ ಮೇಲೆ ನಿಂತು ಸ್ಕಾರ್ಫ್ ಅನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡು ಫ್ಯಾನ್‌ಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿರುವುದು  ಕಂಡು ಬಂದಿದೆ. ಆದರೆ, ಈ ಸಂದರ್ಭ ಆಕೆಯನ್ನು ತಡೆಯಲು ಪತಿ ಸಂಜಯ್ ಯಾವುದೇ ಪ್ರಯತ್ನ ಮಾಡಿಲ್ಲ. ಅದರ ಬದಲು, ‘‘ಗ್ರೇಟ್ ಇದು ನಿನ್ನ ಮನಸ್ಥಿತಿ. ನಿನಗೆ ತುಂಬಾ ಕೆಟ್ಟ ಮನಸ್ಥಿತಿ ಇದೆ’’ ಎಂದು ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿ ಬಂದಿದೆ. ಶೋಬಿತಾ ತಾನು ಹಾಕಿಕೊಂಡಿದ್ದ ನೇಣನ್ನು ಬಿಚ್ಚಿ ಹಾಸಿಗೆ ಮೇಲೆ ನಿಂತಿದ್ದಾಳೆ. ರಕ್ಷಣೆಗೆ ಬಾರದ ಗಂಡನತ್ತ ದೃಷ್ಟಿ ಹಾಯಿಸಿದ್ದಾಳೆ. ಅಲ್ಲಿಗೆ ವೀಡಿಯೊ ಕೊನೆಗೊಳ್ಳುತ್ತದೆ. 

ಪ್ರಕರಣಕ್ಕೆ ಸಂಬಂಧಿಸಿ ಶೋಭಿತಾರ ಆತ್ಮಹತ್ಯೆಯಲ್ಲಿ ಸಂಜಯ್ ಗುಪ್ತಾನ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!