ಗಂಗೊಳ್ಳಿ: ಮೀನುಗಾರ ನಾಪತ್ತೆ
ಗಂಗೊಳ್ಳಿ ಅ.28(ಉಡುಪಿ ಟೈಮ್ಸ್ ವರದಿ): ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟಿನಿಂದ ಆಯತಪ್ಪಿ ನದಿಗೆ ಬಿದ್ದು ಮೀನುಗಾರನೋರ್ವ ನಾಪತ್ತೆಯಾಗಿರುವ ಘಟನೆ ಗಂಗೊಳ್ಳಿಯ ಪಂಚಗಂಗಾವಳಿ ನದಿಯಲ್ಲಿ ನಡೆದಿದೆ.
ರಘುವೀರ ತಂಡೇಲ (28) ನೀರಿನಲ್ಲಿ ಮುಳುಗಿ ನಾಪತ್ತೆಯಾದವರು.
ಬುಧವಾರ ಬೆಳಿಗ್ಗೆ ರಘುವೀರ ತಂಡೇಲ ಅವರು, “ಸಾಗರದೀಪಾ” ಎಂಬ ಬೋಟಿನಲ್ಲಿ ಬೋಟ್ ನ ಮಾಲಕರಾದ ಬಿ. ಶೇಖರ ಕುಂದರ್ ಅವರು ಸೇರಿದಂತೆ ಇತರರೊಂದಿಗೆ ಗಂಗೊಳ್ಳಿ ಗ್ರಾಮದ ಪಂಚಗಂಗಾವಳಿ ನದಿಯಲ್ಲಿ ಮೀನುಗಾರಿಕೆಗೆ ಹೊರಟಿದ್ದರು. ಈ ವೇಳೆ ಬೋಟ್‌ನಲ್ಲಿ ಕುಳಿತಿದ್ದ ರಘುವೀರ ತಂಡೇಲ ಎಂಬವರು ಆಕಸ್ಮಿಕವಾಗಿ ಆಯಾತಪ್ಪಿ ಬೋಟ್‌ನಿಂದ ಪಂಚಗಂಗಾವಳಿ ನದಿಯ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ.
ಇವರನ್ನು ನದಿಯಲ್ಲಿ ಹುಡುಕಾಡಿದರೂ ಈವರೆಗೆ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಬಿ.ಶೇಖರ ಕುಂದರ್ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.