ಸುರತ್ಕಲ್ ಟೋಲ್ ಸುತ್ತ ನಿಷೇಧಾಜ್ಞೆ ಜಾರಿ- ಕಮಿಷನರ್ ಆದೇಶ
ಸುರತ್ಕಲ್;ಸುರತ್ಕಲ್ ಠಾಣಾ ವ್ಯಾಪ್ತಿಯ ಟೋಲ್ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಪ್ರಕಾರ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 6ರಿಂದ ನವಂಬರ್ 3ರ ಸಂಜೆ 6 ಗಂಟೆಯ ತನಕ ಸುರತ್ಕಲ್ ಪೊಲೀಸ್ ಠಾಣೆಯ ಟೋಲ್ ಪ್ಲಾಜಾದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಠಿಯಿಂದ ಹಾಗೂ ಟೋಲ್ ಗೇಟ್ ಗೆ ರಕ್ಷಣೆ ನೀಡುವ ದೃಷ್ಟಿಯಿಂದ ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಕಮಿಷನರ್ ಹೇಳಿದ್ದಾರೆ.
ಸೆಕ್ಷನ್ ಜಾರಿಯಲ್ಲಿರುವ ಭಾಗದಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಘೋಷಣೆಗಳನ್ನು ಕೂಗುವುದು, ಭಿತ್ತಿ ಪತ್ರ ಪ್ರದರ್ಶನ, ಶಸ್ತ್ರಗಳನ್ನು ಕೊಂಡೊಯ್ಯುವುದು, ಪಟಾಕಿ ಸಿಡಿಸುವುದು, ಮೆರವಣಿಗೆ, ಜಾಥಾ, ರಸ್ತೆ ತಡೆ ನಡೆಸಲು ಅವಕಾಶವಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಹಾಗೂ ಸಮಾನ ಮನಸ್ಕ ಸಂಘಟಣೆ ವತಿಯಿಂದ ಅ.29ರಿಂದ ಟೋಲ್ ಗೇಟ್ ಬಳಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿತ್ತು.ಗುರುವಾರ ಹೋರಾಟ ಸಮಿತಿ ಯೊಂದಿಗೆ ಜಿಲ್ಲಾಧಿಕಾರಿ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆ ನಡೆಸಿದ್ದರು. ಟೋಲ್ ಗೇಟ್ ತೆರವಿಗೆ ಇನ್ನೂ ಹತ್ತು ದಿನಗಳ ಅವಧಿ ನೀಡುವಂತೆ ಮನವಿ ಮಾಡಿದ್ದರು.ಇದನ್ನು ಸಮಿತಿ ವಿರೋಧಿಸಿತ್ತು.