ಅ.29 ಕಾಂಗ್ರೆಸ್’ನಿಂದ ಜಿಲ್ಲೆಯಾದ್ಯಂತ ಬೃಹತ್ ತಿರಂಗಾ ಬೈಕ್ ಜಾಥಾ
ಉಡುಪಿ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬೃಹತ್ ತಿರಂಗಾ ಬೈಕ್ ಜಾಥಾವನ್ನು ಅಕ್ಟೋಬರ್ 29 ರಂದು ಮಧ್ಯಾಹ್ನ 2 ಗಂಟೆಗೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ತಿಳಿಸಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಕ್ ಜಾಥಾವು ಬೈಂದೂರಿನಿಂದ ಆರಂಭಗೊಂಡು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಪಡುಬಿದ್ರಿ ಮೂಲಕ ಕಾರ್ಕಳ ತಾಲೂಕಿನ ಇನ್ನಾಕ್ಕೆ ಆಗಮಿಸಿ, ಅಲ್ಲಿಂದ ಬೆಳ್ಮಣ್ ಮಾರ್ಗವಾಗಿ ಕಾರ್ಕಳಕ್ಕೆ ತಲುಪಲಿದೆ ಎಂದರು. ಬೈಕ್ ಜಾಥಾದಲ್ಲಿ ಜಿಲ್ಲೆಯ 10 ಬ್ಲಾಕ್ ಗಳಿಂದ ಸುಮಾರು 5 ಸಾವಿರಕ್ಕೂ ಅಧಿಕ ಬೈಕ್ ಗಳೊಂದಿಗೆ ಯುವಕರು ಭಾಗವಹಿಸಲಿದ್ದಾರೆ.
ಕಾರ್ಕಳದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು, ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಎಐಸಿಸಿ ಕಾರ್ಯದರ್ಶಿ ಕೃಷ್ಣ ಅಲ್ಲವಾರ್, ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವ ನಾರಾಯಣ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ವಿನಯ್ ಕುಮಾರ್ ಸೊರಕೆ, ರಮಾನಾಥ ರೈ, ಮಾಜಿ ಶಾಸಕ ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಸದಾಶಿವ ದೇವಾಡಿಗ, ಪ್ರಭಾಕರ ಬಂಗೇರ, ಸೌರಭ್ ಬಲ್ಲಾಳ್ ಇದ್ದರು.