ಬಿಡುಗಡೆಯಾಗದ ಸೀಮೆಎಣ್ಣೆ ನ.7ರಂದು ಮೀನುಗಾರರ ಹಕ್ಕೊತ್ತಾಯ
ಕುಂದಾಪುರ: ಕಳೆದ ಮೂರು ತಿಂಗಳಿಂದ ಬಿಡುಗಡೆಯಾಗಬೇಕಿದ್ದ ಮೀನುಗಾರರ ಸೀಮೆಎಣ್ಣೆ ಬಿಡುಗಡೆಯಾಗದೇ ಇದ್ದಲ್ಲಿ ನವೆಂಬರ್ 7ರಂದು ಉಡುಪಿ, ಮಂಗಳೂರು ಹಾಗೂ ಕಾರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಏಕಕಾಲದಲ್ಲಿ ಮೀನುಗಾರರು ಹಕ್ಕೊತ್ತಾಯ ಆಂದೋಲನ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ ಹೇಳಿದ್ದಾರೆ.
ಗುರುವಾರ ಉಪ್ಪುಂದದಲ್ಲಿ ನಡೆದ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಒಕ್ಕೂಟ ವತಿಯಿಂದ ನಡೆದ ಹಕ್ಕೋತ್ತಾಯದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಹಲವು ಬಾರಿ ಸಂಸದ ಹಾಗೂ ಸಚಿವರ ಮೂಲಕ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಕಳೆದ ಮೂರು ತಿಂಗಳಿನಿಂದ ಸೀಮೆಎಣ್ಣೆ ಬಿಡುಗಡೆ ಮಾಡದೇ ಇರುವುದರಿಂದ ಮೀನುಗಾರರು ಬೀದಿಗೆ ಬರುವಂತಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್, ಬಿ.ವೈ ರಾಘವೇಂದ್ರ ಮೀನುಗಾರರ ಸಚಿವರಾದ ಎಸ್ ಅಂಗಾರ ಅವರ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದರು ಕೂಡ, ಇದುವರೆಗೂ ಸೀಮೆಎಣ್ಣೆ ಬಿಡುಗಡೆಯಾಗಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಒಕ್ಕೂಟದ ಗೌರವಾಧ್ಯಕ್ಷ ನವೀನ್ ಚಂದ್ರ ಉಪ್ಪುಂದ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ಬಿಡುಗಡೆಯಾಗಬೇಕಿದ್ದ ಸೀಮೆ ಎಣ್ಣೆ ತಕ್ಷಣ ಬಿಡುಗಡೆ ಮಾಡಬೇಕು. 2016-17ರ ಸಾಲಿನಿಂದ ಮೀನುಗಾರರಿಗೆ ಸಿಗಬೇಕಾದ ಶೇ.50 ಸಬ್ಸಿಡಿಯನ್ನು ತಕ್ಷಣ ಜ್ಯಾರಿಗೆ ತರಬೇಕು. ಕರಾವಳಿಯ 8130 ಪರ್ಮಿಟ್ಗಳಿಗೆ 120 ಕೋಟಿ ರೂಪಾಯಿಯ ಬಜೆಟ್ ಮಂಡಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟದ ಪ್ರ.ಕಾರ್ಯದರ್ಶಿ ಗೋಪಾಲ್ ಆರ್.ಕೆ., ಗೌರವ ಸಲಹೆಗಾರರಾದ ಚಂದ್ರಕಾಂತ್ ಕರ್ಕೇರ, ಸಂಘಟನಾ ಕಾರ್ಯದರ್ಶಿ ಯಶವಂತ ಖಾರ್ವಿ ಗಂಗೊಳ್ಳಿ, ಅಶ್ವಥ್ ಕಾಂಚನ್ ಮಂಗಳೂರು, ಕೃಷ್ಣ ಹರಿಕಾಂತ್ ಮುರ್ಡೇಶ್ವರ, ಉಪಾಧ್ಯಕ್ಷರಾದ ವಿಕ್ರಂ ಸಾಲ್ಯಾನ್ ಮಲ್ಪೆ, ವಸಂತ ಸುವರ್ಣ, ಸತೀಶ್ ಕುಂದರ್, ಕೋಶಾಧಿಕಾರಿ ಪುರಂದರ ಕೋಟ್ಯಾನ್ ಉಪಸ್ಥಿತರಿದ್ದರು.