ಕಾಪು: ಪೆರ್ಣಂಕಿಲ ಶಂಕರ ಪ್ರತಿಷ್ಠಾನದಿಂದ ಗೂಡುದೀಪ ಸ್ಪರ್ಧೆ
ಕಾಪು ಅ.27: ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ವತಿಯಿಂದ ಕಾಪು ಬೀಚ್ ನಲ್ಲಿ ಗೂಡುದೀಪ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತಾಡಿದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರು, ಸಾಂಪ್ರದಾಯಿಕತೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳು ಅನಿವಾರ್ಯ. ಈ ನಿಟ್ಟಿನಲ್ಲಿ ಶಂಕರ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು.
ಇದೇ ವೇಳೆ ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ಟ್ರಸ್ಟಿ ಶ್ರೀಶ ನಾಯಕ್ ಅವರು ಮಾತನಾಡಿ, ಪ್ರತಿವರ್ಷ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ನಮ್ಮ ಟ್ರಸ್ಟ್ ತಂದೆಯ ಆಶಯದಂತೆ ನಡೆಯುತ್ತಿದೆ. ಸಾಂಸ್ಕೃತಿಕ, ಧಾರ್ಮಿಕವಾಗಿ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯಪ್ರವೃತ್ತವಾಗಿದೆ ಎಂದರು.
ಈ ಗೂಡುದೀಪ ಸ್ಪರ್ಧೆಯಲ್ಲಿ ರಕ್ಷಿತ್ ಕುಮಾರ್ ಕಾಪಿಕಾಡ್ ಪ್ರಥಮ ಬಹುಮಾನ ರೂ. 11,111ರೂ, ರವಿರಾಜ್ ಮಂಗಳೂರು ದ್ವಿತೀಯ ಬಹುಮಾನ ರೂ. 7,777ನ್ನು ಹಾಗೂ ಉಮೇಶ್ ಕಾವೂರು ತೃತೀಯ ಬಹುಮಾನ ರೂ.5,555ನ್ನು ಪಡೆದುಕೊಂಡರು.
ಕಲಾವಿದರಾದ ಶಶಾಂಕ್, ರಕ್ಷಾ ಮತ್ತು ಯಶವಂತ್ ಗೂಡುದೀಪ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಗೃಹ ನಿರ್ಮಾಣಕ್ಕಾಗಿ ಟ್ರಸ್ಟ್ ವತಿಯಿಂದ ಧನಸಹಾಯ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಉದಯ ಕುಮಾರ್ ಶೆಟ್ಟಿ, ಶಾಸಕ ಲಾಲಾಜಿ ಆರ್ ಮೆಂಡನ್, ಶ್ರೀಕಾಂತ ನಾಯಕ್, ಕುತ್ಯಾರು ನವೀನ್ ಶೆಟ್ಟಿ, ವೀಣಾ ಶೆಟ್ಟಿ, ದಿನೇಶ್ ಮೆಂಡನ್, ಗಂಗಾಧರ ಸುವರ್ಣ, ಶಿಲ್ಪಾ ಸುವರ್ಣ, ಮಿಥುನ್ ಹೆಗ್ಡೆ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಅನಿಲ್ ಶೆಟ್ಟಿ, ಸ್ವೀಕಾರ್ ನಾಯಕ್, ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ಟ್ರಸ್ಟಿ ಶ್ರೀಶ ನಾಯಕ್, ಯಶವಂತ್, ಸಂತೋಷ್ ಕುಮಾರ್ ಮೂಡುಬೆಳ್ಳೆ ಮತ್ತಿತರರು ಉಪಸ್ಥಿತರಿದ್ದರು.