ಮಣಿಪಾಲ: ಕಾರಿನ ಮೇಲೆ ಪಟಾಕಿ ಸಿಡಿಸಿ ಹುಚ್ಚಾಟ- ಯುವಕ ವಶಕ್ಕೆ
ಉಡುಪಿ ಅ.27(ಉಡುಪಿ ಟೈಮ್ಸ್ ವರದಿ): ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕಾರಿನ ಮೇಲೆ ಪಟಾಕಿ ಇಟ್ಟು ಸಿಡಿಸಿ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಹುಚ್ಚಾಟ ಮೆರೆದಿದ್ದ ಯುವಕನನ್ನ ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಣಿಪಾಲದ ಸಲೂನ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಕಾರು ಚಾಲಕ ವಿಶಾಲ್ ಕೊಹ್ಲಿ (26) ಪೊಲೀಸರು ವಶಕ್ಕೆ ಪಡೆದ ಆರೋಪಿ.
ಅ.25 ರಂದು ರಾತ್ರಿ ದೀಪಾವಳಿ ಸಂಭ್ರಮದ ನಡುವೆ ಯುವಕನೋರ್ವ ಮಣಿಪಾಲ ಪೊಲೀಸ್ ಠಾಣ ವ್ಯಾಪ್ತಿಯ ಡಾ.ವಿ.ಎಸ್ ಆಚಾರ್ಯ ರಸ್ತೆಯಲ್ಲಿ ಕಾರಿನ ಮೇಲೆ ಪಟಾಕಿ ಇಟ್ಟು ಸಿಡಿಸಿದ್ದು ಮಾತ್ರವಲ್ಲದೆ ಕಾರನ್ನು ನಿರ್ಲಕ್ಷ್ಯ ತನ ಹಾಗೂ ಅಜಾಗರೂಕತೆಯಿಂದ ಅಡ್ಡದಿಡ್ಡಿಯಾಗಿ ಅಪಾಯಕಾರಿ ಯಾಗಿ ವಾಹನ ಚಲಾಯಿಸಿದ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ಆರೋಪಿಯನ್ನ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ ಅವರ ಮಾರ್ಗದರ್ಶನದಲ್ಲಿ, ಮಣಿಪಾಲ ಪೊಲೀಸ್ ಠಾಣಾ ಪಿಎಸ್ಐ ರಾಜಶೇಖರ್ ವಂದಲಿ, ಎ.ಎಸ್.ಐ ಶೈಲೇಶ್ ಕುಮಾರ್, ಹೆಡ್ ಕಾನ್ಸ್‌ಟೇಬಲ್ ಪ್ರಸನ್ನ ಅವರ ತಂಡ ಕಾರ್ಯಪ್ರವೃತ್ತರಾಗಿ ಇಂದು ಮಣಿಪಾಲದ ಸಿಂಡಿಕೇಟ್ ವೃತ್ತದ ಬಳಿ ಆರೋಪಿಯನ್ನು ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.