ಶಾಸಕ, ಮಂತ್ರಿಗಳಿಗೆ ರಸ್ತೆ ಗುಂಡಿಗಳ ವೀಕ್ಷಣೆ ಮಾಡಲು ಸಮಯವಿಲ್ಲವೇ?- ಹರೀಶ್ ಕಿಣಿ
ಉಡುಪಿ: ವಿದ್ಯಾರ್ಥಿಗಳನ್ನು ಮತ್ತು ದೈವದ ಚಾಕ್ರಿದಾರರನ್ನು ಇತ್ತೀಚೆಗೆ ಉಡುಪಿ ಶಾಸಕ ರಘುಪತಿ ಭಟ್ ಮತ್ತು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಕೆಲಸದ ಒತ್ತಡದ ನಡುವೆಯೂ ಚಲನಚಿತ್ರ ವೀಕ್ಷಣೆಗೆ ಕರೆದುಕೊಂಡು ಹೋಗಿದ್ದಾರೆ. ಅದೇ ರೀತಿ ಉಡುಪಿ ಜಿಲ್ಲೆಯ ರಸ್ತೆಗುಂಡಿಗಳ ವೀಕ್ಷಣೆಗೆ ಲೋಕೋಪಯೋಗಿ, ಜಿ.ಪಂ. ಹಾಗೂ ನಗರಸಭೆಯ ಇಂಜಿನಿಯರುಗಳು ಮತ್ತು ಅಧಿಕಾರಿಗಳನ್ನು ಕರೆ ತರುವಂತೆ ಕೆಪಿಸಿಸಿ ಕೋ- ಆರ್ಡಿನೇಟರ್ ಅಲೆವೂರು ಹರೀಶ್ ಕಿಣಿ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಪಿಡಬ್ಲ್ಯೂಡಿ, ಜಿ.ಪಂ, ಪುರಸಭೆ, ನಗರಸಭೆ, ಫಿಶರೀಸ್ ರಸ್ತೆಗಳೆಲ್ಲವೂ ತೀರಾ ಹದಗೆಟ್ಟಿದ್ದು, ನಿತ್ಯ ಸಂಚಾರಿಗಳಿಗೆ, ಆಟೊರಿಕ್ಷಾ ಚಾಲಕ-ಮಾಲಕರಿಗೆ, ದ್ವಿಚಕ್ರ ಸವಾರರಿಗೆ ತೊಂದರೆಯಾಗಿದೆ. ಈ ಬಗ್ಗೆ ಸಾಮಾಜಿಕ ಚಿಂತಕರು, ಸಾರ್ವಜನಿಕರು ಹಲವಾರು ಬಾರಿ ಸಾಮಾಜಿಕ ಜಾಲತಾಣ, ಪತ್ರ ಮುಖೇನ, ಪ್ರತಿಭಟನೆಗಳ ಮೂಲಕ ಮನವಿ ಮಾಡಿದ್ದರೂ, ಅಧಿಕಾರಿಗಳು, ಜನಪ್ರತಿನಿಧಿಗಳು ಯಾವುದೇ ರೀತಿ ಸ್ಪಂದಿಸದೆ ಮೌನವ್ರತ ವಹಿಸಿದ್ದಾರೆ. ಚಲನಚಿತ್ರ ವೀಕ್ಷಣೆಗೆ ಸಮಯ ಹೊಂದಿಸುವ ಜನಪ್ರತಿನಿಧಿಗಳು ರಸ್ತೆಗುಂಡಿಗಳ ಪರಿಶೀಲನೆಗೂ ಸಮಯ ಮಾಡಿಕೊಂಡು ಅಧಿಕಾರಿಗಳೊಂದಿಗೆ ಆಗಮಿಸಿ ರಸ್ತೆ ದುರಸ್ಥಿಗೆ ಕ್ರಮ ಕೈಗೊಳ್ಳುವಂತೆ ಹರೀಶ ಕಿಣಿ ಆಗ್ರಹಿಸಿದ್ದಾರೆ.