ಕಾಂಗ್ರೆಸ್ ಪಕ್ಷವನ್ನು ಬೆಳೆಸುವಲ್ಲಿ ಪ್ರಣಬ್ ಸಾಧನೆ ವಿಶೇಷವಾದುದು: ನಾಗೇಶ್

ಉಡುಪಿ (ಉಡುಪಿ ಟೈಮ್ಸ್ ವರದಿ) ಗಾಂಧಿ ಕುಟುಂಬದ ಆಪ್ತರಾಗಿ 5 ಬಾರಿ ರಾಜ್ಯಸಭಾ ಸದಸ್ಯ ಮತ್ತು  ವಿತ್ತ ಸಚಿವ, ರಕ್ಷಣಾ ಸಚಿವರಾಗಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತ ಮತ್ತು ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಭಾರತರತ್ನ ಪುರಸ್ಕೃತ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ವಿಶೇಷ ಮುತುವರ್ಜಿ ವಹಿಸಿದ್ದರು ಎಂದು ನಾಗೇಶ್ ಕುಮಾರ್ ಉದ್ಯಾವರ ತಿಳಿಸಿದರು.


 ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯು ನಿನ್ನೆ ನಿಧನರಾದ ಮಾಜಿ ರಾಷ್ಟ್ರಪತಿ, ಹಿರಿಯ ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರಿಗೆ ಗೌರವ ಸಲ್ಲಿಸಿ, ಶ್ರದ್ಧಾಂಜಲಿ ಸಭೆ ನಡೆಸಲಾಯಿತು.


1969 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಮನಗೆದ್ದ ನೀಲಿಕಣ್ಣಿನ ಯುವಕ ಪ್ರಣಬ್ ಮುಖರ್ಜಿ, ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದು, ವಿತ್ತ ಮತ್ತು ರಕ್ಷಣಾ ಸಚಿವರಾಗಿ ದೇಶವನ್ನು ಸುಭದ್ರವಾಗಿ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದರು. ತನ್ನ ರಾಜಕೀಯ ಜೀವನದ ಏಳು ಬೀಳುಗಳ ನಡುವೆ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಪ್ರಣಬ್ ಸಾಧನೆ ವಿಶೇಷವಾದುದು. ವಿತ್ತ ಸಚಿವರಾಗಿದ್ದಾಗ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಡಿಸ್ ಮತ್ತು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರ ಮನವಿಗೆ ಮೀನುಗಾರರ ಸಮಸ್ಯೆಗೆ ಸ್ಪಂದಿಸಿದ್ದರು. ಇಂತಹ ನಾಯಕರು ಮತ್ತೆ ಹುಟ್ಟಿ ಬರಲಿ ಎಂದು ನಾಗೇಶ್ ಕುಮಾರ್ ಉದ್ಯಾವರ ನುಡಿನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ ಶೇಖರ್, ಮಾಜಿ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಪ್ರಮುಖರಾದ ಮೇರಿ ಡಿಸೋಜ, ಪುಂಡರೀಶ್ ಕುಂದರ್, ಭಾಸ್ಕರ್ ಕೋಟ್ಯಾನ್, ಸೋಮನಾಥ್ ಸುರತ್ಕಲ್, ಚಂದ್ರಾವತಿ ಭಂಡಾರಿ, ಗಿರೀಶ್ ಕುಮಾರ್, ಇರ್ಫಾನ್ ಆರುರೂ ತೋಟ, ಸುಹೇಲ್, ಹಮೀದ್ ಸಾಬ್ಜಾನ್, ಪ್ರೇಮ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.


ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್ ಉದ್ಯಾವರ ಸ್ವಾಗತಿಸಿದರೆ, ಕಾರ್ಯದರ್ಶಿ ಆಬಿದ್ ಅಲಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!