ಉಳ್ಳಾಲ: ಪತ್ನಿಯ ಹತ್ಯೆಗೈದು ಪತಿ ನೇಣಿಗೆ ಶರಣು
ಉಳ್ಳಾಲ ಅ.27 : ಪಿಲಾರು ಪಂಜಂದಾಯನ ದೈವಸ್ಥಾನದ ಬಳಿಯ ಮನೆಯೊಂದರಲ್ಲಿ ದಂಪತಿಗಳ ಮೃತದೇಹದ ಅನುಮನಾಸ್ಪದ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪಿಲಾರು ನಿವಾಸಿಗಳಾದ ಶೋಭಾ ಪೂಜಾರಿ (45) ಮತ್ತು ಆಕೆಯ ಪತಿ ಶಿವಾನಂದ ಪೂಜಾರಿ (55) ಮೃತಪಟ್ಟವರು.
ಮಹಿಳೆಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ ಆಗಿದ್ದು, ಆಕೆಯ ಪತಿಯ ಮೃತದೇಹ ಸಮೀಪದ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೈಂಟರ್ ಕೆಲಸ ಮಾಡುತ್ತಿದ್ದ ಶಿವಾನಂದ ಪೂಜಾರಿ, ಪತ್ನಿಯೊಂದಿಗೆ ವಿನಾ ಕಾರಣ ಗಲಾಟೆ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಇದೇ ಕಾರಣಕ್ಕೆ ಪತ್ನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿ, ಪತಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗುರುವಾರ ಬೆಳಗ್ಗೆ ಹತ್ತು ಗಂಟೆಯ ಸುಮಾರಿಗೆ ಶೋಭಾ ಅವರು ಮನೆಯ ಹತ್ತಿರದ ಮನೆಯಿಂದ ಗೊಬ್ಬರ ತಂದಿದ್ದರು. ಮಧ್ಯಾಹ್ನ 12 ಗಂಟೆಯ ವೇಳೆಗೆ ಶೋಭಾ ಅವರ ಹಿರಿಯ ಮಗ ಕಾರ್ತಿಕ್ ತಾಯಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರಿಗೆ ವಿಚಾರಿಸಲು ತಿಳಿಸಿದ್ದು, ಪಕ್ಕದ ಮನೆಯವರು ಶೋಭಾರ ಮನೆಗೆ ಬಂದ ವೇಳೆ ಬೆಡ್ ರೂಮಿನ ಮಂಚದಲ್ಲಿ ಹೆಣವಾಗಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಪಕ್ಕದ ತೋಟದಲ್ಲಿ ಶಿವಾನಂದ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮೃತರ ಪುತ್ರ ಕಾರ್ತಿಕ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.