ಅಯೋಧ್ಯೆ ಶ್ರೀರಾಮಚಂದ್ರ ದೇವರ “ದಿಗ್ವಿಜಯ ಯಾತ್ರೆ” ನ.7ಕ್ಕೆ ಉಡುಪಿಗೆ
ಉಡುಪಿ ಅ.27(ಉಡುಪಿ ಟೈಮ್ಸ್ ವರದಿ): ಹಿಂದೂ ಸಮಾಜವನ್ನು ಜಾಗೃತಿ ಮೂಡಿಸುವ ಉದ್ದೇಶದಲ್ಲಿ ರಾಮರಾಜ್ಯ ನಿರ್ಮಾಣದ ಕಲ್ಪನೆಯೊಂದಿಗೆ ಸಂತ ಸಮಿತಿಯ ನೇತೃತ್ವದಲ್ಲಿ ಹೊರಟಿರುವ ಅಯೋಧ್ಯೆ ಪ್ರಭು ಶ್ರೀರಾಮಚಂದ್ರ ದೇವರ ದಿಗ್ವಿಜಯ ಯಾತ್ರೆಯು ನ.7 ರಂದು ಉಡುಪಿ ಜಿಲ್ಲೆಗೆ ಪ್ರವೇಶಿಸಲಿದೆ ಎಂದು ದಿಗ್ವಿಜಯ ಯಾತ್ರೆಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಕೊಡವೂರು ಅವರು ತಿಳಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ದಿಗ್ವಿಜಯ ಯಾತ್ರೆಯು ಆ.5 ರಂದು ಆರಂಭಗೊಂಡಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಚಾಲನೆ ನೀಡಿದ್ದರು. ಇದೀಗ 27 ರಾಜ್ಯ, 15,000 ಕಿ.ಮೀ. 60 ದಿನಗಳನ್ನು ಕ್ರಮಿಸಿ ನ.7 ರಂದು ಉಡುಪಿ ಜಿಲ್ಲೆಗೆ ಯಾತ್ರೆ ಪ್ರವೇಶಿಸಲಿದೆ ಎಂದು ಹೇಳಿದರು.
ಈ ದಿಗ್ವಿಜಯ ಯಾತ್ರೆಯನ್ನು ಸ್ವಾಗತಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ಪ್ರಮುಖರನ್ನು ಒಡಗೂಡಿಕೊಂಡು ಸ್ವಾಗತ ಸಮಿತಿಯು ರಚನೆಗೊಂಡಿದ್ದು ನ. 7 ರಂದು ಭಕ್ತಿಪೂರ್ವಕವಾಗಿ ಆಯೋಧ್ಯೆ ಶ್ರೀರಾಮಚಂದ್ರ ರಥಯಾತ್ರೆಯನ್ನು ಸ್ವಾಗತಿಸಲು ಪೂರ್ವತಯಾರಿ ಭರದಿಂದ ನಡೆಯುತ್ತಿದೆ.
ಈಗಾಗಲೇ ಜಿಲ್ಲೆಯ ಹಲವು ಧಾರ್ಮಿಕ ಕೇಂದ್ರಗಳು ಸಂಘ ಸಂಸ್ಥೆಗಳಲ್ಲಿ, ಪೂರ್ವಭಾವಿ ಸಭೆ ನಡೆದಿದ್ದು, ಸಮಸ್ತ ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ನ.7 ರಂದು ಬೆಳಿಗ್ಗೆ 9 ಗಂಟೆಗೆ ದಿಗ್ವಿಜಯ ರಥಯಾತ್ರೆಯು ಉಡುಪಿಗೆ ತಲುಪಲಿದ್ದು ಅಂದು ಬೆಳಿಗ್ಗೆ 10 ಗಂಟೆಗೆ ಸಂತೆಕಟ್ಟೆ ಜಂಕ್ಷನ್ ನಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. ಸಂತೆಕಟ್ಟೆ ಜಂಕ್ಷನ್ ನಲ್ಲಿ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಲಿದ್ದು, ಈ ಸಭಾಕಾರ್ಯಕ್ರಮದಲ್ಲಿ ಸಂತ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಶ್ರೀಶಕ್ತಿ ಶಾಂತಾನಂದ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಮಠಾಧೀಶರೂ, ರಾಮಮಂದಿರದ ವಿಶ್ವಸ್ಥರಾದ ಶ್ರೀವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿದ್ದು, ಆಶೀರ್ವಚನ ನೀಡಲಿದ್ದಾರೆ. ಹಾಗೂ ಧಾರ್ಮಿಕ ಸಭಾಕಾರ್ಯಕ್ರಮದ ಬಳಿಕ ಅಯೋಧ್ಯೆಯಿಂದ ದಿಗ್ವಿಜಯ ರಥಯಾತ್ರೆಯಲ್ಲಿ ಬರುವ ಶ್ರೀರಾಮನ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಲು ಭಕ್ತಾಭಿಮಾನಿಗಳಿಗೆ ಅವಕಾಶ ಕಲ್ಪಿಸಲಾಗುವುದು. ತದನಂತರ ಸಂತೆಕಟ್ಟೆಯಿಂದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದವರೆಗೆ ಬ್ರಹತ್ ವಾಹನ ಜಾಥಾದ ಮೂಲಕ ಕಾರು ಮತ್ತು ಬೈಕ್ ನಲ್ಲಿ ಸಾಗಿಕೊಂಡು ಯಾತ್ರೆಯು ಸಮಾಪನಗೊಳ್ಳಲಿದೆ ಎಂದು ತಿಳಿಸಿದರು.
ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತಾಭಿಮಾನಿಗಳಿಗೆ ನಾಡೋಜ ಡಾ.ಜಿ.ಶಂಕರ್ ಇವರ ಸಹಕಾರದಿಂದ ಅನ್ನಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಆಗಬೇಕೆನ್ನುವ ಹಿಂದೂಗಳ ಬಲುದೊಡ್ಡ ಕನಸು ನನಸಾಗಲಿರುವ ಈ ಒಂದು ಸುಸಂದರ್ಭದಲ್ಲಿ ಉಡುಪಿಯ ಭಕ್ತಾಭಿಮಾನಿಗಳಿಗೆ ಆಯೋಧ್ಯೆಗೆ ಹೋಗಿ ರಾಮನಸೇವೆಯನ್ನು ಮಾಡಲಿಕ್ಕೆ ಆಗದಿದ್ದರೂ, ಆಯೋಧ್ಯೆಯಿಂದ ಬರುವ ಈ ಒಂದು ದಿಗ್ವಿಜಯ ರಥಯಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುವ ಅವಕಾಶ ಸಿಕ್ಕಿದೆ. ಆದ್ದರಿಂದ ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಂಡು ಉಡುಪಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಈ ಒಂದು ಪುಣ್ಯಕಾರ್ಯದಲ್ಲಿ ಭಾಗವಹಿಸಬೇಕಾಗಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ದಿಗ್ವಿಜಯ ಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ, ಉಪಾಧ್ಯಕ್ಷ ಮನೋಹರ್ ಶೆಟ್ಟಿ ತೋನ್ಸೆ, ಮಹಿಳಾ ಪ್ರಮುಖರಾದ ತಾರಾ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.