ಉಡುಪಿ: ನಾಪತ್ತೆಯಾಗಿದ್ದ ಮೆಡಿಕಲ್ ಸ್ಟೋರ್ ಉದ್ಯೋಗಿಯ ಮೃತದೇಹ ಪತ್ತೆ
ಉಡುಪಿ: ನೇಜಾರು ನಿಡಂಬಳ್ಳಿ ಎಂಬಲ್ಲಿಂದ ಅ.18ರಂದು ರಾತ್ರಿ ನಾಪತ್ತೆಯಾಗಿದ್ದ 44 ವರ್ಷದ ಪ್ರವೀಣ್ ಬೆಳ್ಚಾಡ ಎಂಬವರ ಮೃತದೇಹ ಹತ್ತು ದಿನ ಬಳಿಕ ಬ್ರಹ್ಮಾವರ ತಾಲೂಕಿನ ಹಂದಾಡಿ ಕಂಬಳ ಗದ್ದೆಯ ಹೊಳೆ ಬದಿಯಲ್ಲಿ ಇಂದು ಪತ್ತೆಯಾಗಿದೆ.
ಇವರು ನೇಜಾರಿನ ಬಂಗ್ಲೆ ಮನೆ ಬಳಿಯಲ್ಲಿ ಸ್ವಂತ ಮನೆಯಲ್ಲಿ ವಾಸ ಮಾಡಿಕೊಂಡಿದ್ದು, 6 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಪತ್ನಿಯಿಂದ ದೂರವಿದ್ದು ಒಬ್ಬಂಟಿಯಾಗಿ ವಾಸವಾಗಿದ್ದರು. ಇವರು ಪ್ರತಿ ದಿನ ಊಟ, ಉಪಹಾರಕ್ಕೆ ಮನೆ ಸಮೀಪದ ದೊಡ್ಡಮ್ಮನ ಮನೆಗೆ ಹೋಗುತ್ತಿದ್ದರು. ಅ. 18ರಂದು ರಾತ್ರಿ ದೊಡ್ಡಮ್ಮನ ಮಗಳು ಜಯಂತಿ ಎಂಬವರು ಪ್ರವೀಣ್ ಅವರಿಗೆ ಕರೆ ಮಾಡಿ ಊಟಕ್ಕೆ ಬರುವಂತೆ ಹೇಳಿದ್ದರು. 10-15 ನಿಮಿಷದಲ್ಲಿ ಬರುತ್ತೇನೆ ಇಲ್ಲದಿದ್ದರೆ, ಬೆಳಿಗ್ಗೆ ತಿಂಡಿ ತಿನ್ನಲು ಬರುತ್ತೇನೆ ಎಂದು ತಿಳಿಸಿದ್ದರು. ಅಂದು ಊಟಕ್ಕೆ ಬಂದಿರಲಿಲ್ಲ. ಅ. 19ರಂದು ಬೆಳಿಗ್ಗೆ 8ಗಂಟೆಗೆ ಜಯಂತಿ ಅವರು ಕರೆ ಮಾಡಿದಾಗ ಪ್ರವೀಣ್ ಅವರ ಮೊಬೈಲ್ ಸ್ವೀಚ್ ಆಫ್ ಆಗಿತ್ತು. ಎರಡು ದಿನಗಳ ಬಳಿಕ ಬ್ರಹ್ಮಾವರ ಸೇತುವೆಯ ಪ್ರವೀಣ್ ಸ್ಕೂಟರ್ ಪತ್ತೆಯಾಗಿತ್ತು. ಆ ಬಳಿಕ ಪ್ರವೀಣ್ ಗಾಗಿ ಅಗ್ನಿಶಾಮಕ ದಳ, ಪೊಲೀಸರ ಸಹಕಾರದೊಂದಿಗೆ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿತ್ತು. ಆದರೆ ಪ್ರವೀಣ್ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಹಂದಾಡಿ ಕಂಬಳ ಗದ್ದೆಯ ಹೊಳೆ ಬದಿಯಲ್ಲಿ ಪ್ರವೀಣ್ ಮೃತದೇಹ ಪತ್ತೆಯಾಗಿದೆ. ಪ್ರವೀಣ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.