ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ: ಅ.29 ರಂದು ವಿವಿಧ ಸಮುದಾಯಗಳ ಸ್ನೇಹ ಸಮಾವೇಶ
ಉಡುಪಿ ಅ.26(ಉಡುಪಿ ಟೈಮ್ಸ್ ವರದಿ): ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ವಿವಿಧ ಸಮುದಾಯಗಳ ಸ್ನೇಹ ಸಮಾವೇಶ ಕಾರ್ಯಕ್ರಮವು ಅ.29 ರಂದು ಸಂಜೆ 6.30ಕ್ಕೆ ಉಡುಪಿಯ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಭವನದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ತಿಳಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಒಕ್ಕೂಟ, ಕಾರ್ಯಕ್ರಮವನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಸಂಶೋಧನಾ ಮತ್ತು ಬೋಧನಾ ಸಹಾಯಕಿ ಡಾ.ಹಸೀನಾ ಎಚ್.ಕೆ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಹೇಬ್ ಕೋಟ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಒಕ್ಕೂಟದ ವತಿಯಿಂದ ನೀಡಲಾಗುವ “ಮಾನವರತ್ನ” ಪ್ರಶಸ್ತಿಗೆ ಈ ಬಾರಿ ಮಾನವೀಯ ಹೋರಾಟಗಾರ, ಸಾಹಿತಿ ಗೋಪಾಲ್ ಬಿ ಶೆಟ್ಟಿ ಯವರನ್ನು ಆಯ್ಕೆ ಮಾಡಲಾಗಿದ್ದು, “ಸೇವಾರತ್ನ” ಪ್ರಶಸ್ತಿಗೆ ಸಮುದಾಯ ಸೇವೆ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡಿರುವ ಹಿರಿಯರಾದ ಹಾಜಿ ಅಬ್ದುಲ್ಲಾ ಪರ್ಕಳ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ಇಪ್ಪತ್ತೈದು ಸಾವಿರ ನಗದು, ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿದೆ ಎಂದು ಮಾಹಿತಿ ನೀಡಲಾಗಿದೆ.
ಇದೇ ವೇಳೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿವಿಧ ಸಮುದಾಯಗಳ ಹಿರಿಯ ವ್ಯಕ್ತಿಗಳನ್ನೂ ಕೂಡಾ ಸನ್ಮಾನಿಸಲಾಗುತ್ತಿದ್ದು , ಈ ಬಾರಿ ಅಲೆವೂರು ಗಣಪತಿ ಕಿಣಿ, ಜನಾರ್ಧನ ತೋನ್ಸೆ, ಈಶ್ವರ ಮಲ್ಪೆ ಹಾಗೂ ಸುಶೀಲ ನಾಡ ಸನ್ಮಾನಿಸಲಾಗುತ್ತದೆ. ಹಾಗೂ ಈ ಬಾರಿಯಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳನ್ನೂ ಗುರುತಿಸಿ ಗೌರವಿಸುವ ಯೋಜನೆಯನ್ನೂ ಹಾಕಿಕೊಂಡಿದ್ದು, ಶೈಕ್ಷಣಿಕ ರಂಗದಲ್ಲಿ ತಮ್ಮ ಸೇವೆಗಾಗಿ ಮೂಳೂರಿನ ಅಲ್ ಇಹ್ಸಾನ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ವಿಶೇಷ ಮಕ್ಕಳ ಸೇವೆಗಾಗಿ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಗಳನ್ನು ಆಯ್ದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಇದರೊಂದಿಗೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್ ಮುಖ್ಯ ಭಾಷಣ ಮಾಡಲಿದ್ದು, ವಿಧಾನಸಭೆ ವಿಪಕ್ಷ ಉಪನಾಯಕ ಮತ್ತು ಮಾಜಿ ಸಚಿವ ಯು.ಟಿ ಖಾದರ್ ಮತ್ತು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜನತಾದಳ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಜನಾಬ್ ಅಬೂಬಕರ್ ನೇಜಾರ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಸುಂದರ್ ಮಾಸ್ಟರ್ ಹಾಗೂ ಕ್ರೈಸ್ತ ಮುಖಂಡ ವಿನೋದ್ ಕ್ರಾಸ್ತ ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಲಾಗಿದೆ.