ಡಾ.ಶ್ರೀಧರ ಎಚ್.ಜಿ ‘ಪ್ರಸ್ಥಾನ’ ಕಾದಂಬರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’

ಕುಂದಾಪುರ ಅ.26(ಉಡುಪಿ ಟೈಮ್ಸ್ ವರದಿ): ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಶ್ರೀಧರ ಎಚ್.ಜಿ,  ಮುಂಡಿಗೆಹಳ್ಳಿ ಅವರ ‘ಪ್ರಸ್ಥಾನ’ ಕಾದಂಬರಿಯು ಈ ಬಾರಿಯ ‘ಚಡಗ ಕಾದಂಬರಿ ಪ್ರಶಸ್ತಿ’ಗೆ ಆಯ್ಕೆಯಾಗಿದೆ. 

ಈ ಬಗ್ಗೆ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ.ಭಾಸ್ಕರ ಆಚಾರ್ಯ ಅವರು ಪ್ರಕಟಣೆ ಮೂಲಕ ಮಾಡಿದ್ದು, ಕೋಟೇಶ್ವರದ ಎನ್. ಆರ್.ಎ.ಎಂ.ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ  ನೆನಪಿನಲ್ಲಿ ನೀಡಲಾಗುವ ಹದಿಮೂರನೆಯ ವರ್ಷದ ‘ಚಡಗ ಕಾದಂಬರಿ ಪ್ರಶಸ್ತಿ’ಗೆ ಡಾ. ಶ್ರೀಧರ ಎಚ್ ಜಿ ಮುಂಡಿಗೆಹಳ್ಳಿ ಅವರ ‘ಪ್ರಸ್ಥಾನ’ ಕಾದಂಬರಿಯು ಆಯ್ಕೆಯಾಗಿದೆ‌ ಎಂದು ತಿಳಿಸಿದ್ದಾರೆ.

ಪ್ರಶಸ್ತಿಪತ್ರ, ಸ್ಮರಣಿಕೆ ಮತ್ತು ಹತ್ತು ಸಾವಿರ ರೂ. ನಗದು ಬಹುಮಾನವನ್ನು ಒಳಗೊಂಡ ಈ ಪ್ರಶಸ್ತಿಯನ್ನು ಲೇಖಕ ಡಾ ಶ್ರೀಧರ ಎಚ್ ಜಿ ಇವರಿಗೆ ನವೆಂಬರ್ ತಿಂಗಳಲ್ಲಿ‌ ಕೋಟದಲ್ಲಿ ಆಯೋಜಿಸಲಾಗುವ ಸಾರ್ವಜನಿಕ ಸಮಾರಂಭದಲ್ಲಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಶ್ರೀಧರ್ ಎಚ್ ಜಿಯವರ ‘ಪ್ರಸ್ಥಾನ’ ಕಾದಂಬರಿಯು ಕಳೆದ ಶತಮಾನದ ನಲವತ್ತರ ದಶಕದಲ್ಲಿ ಮಲೆನಾಡು ಅನುಭವಿಸಿದ ಯಾತನೆಯ, ಪ್ರಾಯಶಃ ಹೆಚ್ಚು ಹೃದಯಸ್ಪರ್ಶಿ ಎಂದು ಗುರುತಿಸಬಹುದಾದ ಕಾದಂಬರಿಯಾಗಿದ್ದು, ಮನುಷ್ಯರ ಬದುಕಲ್ಲಿ ಈ ವಲಸೆಯೆನ್ನುವುದು ಅನಿವಾರ್ಯ, ಲಾಗಾಯ್ತಿನಿಂದ ಆಗುತ್ತಲೇ ಬಂದಿರುವುದು, ನಿರಂತರ ಪ್ರಕ್ರಿಯೆ, ಚಲನಶೀಲತೆಯ ಪರಿಣಾಮ ಎಂಬ ಉದಾರ ದರ್ಶನದ ಆರೋಗ್ಯಕಾರಿ ದಿಕ್ಕೊಂದು ಗುರುತಿಸಲ್ಪಡುತ್ತದೆ ಎಂಬ ಮಹತ್ವದ ಕಾರಣಕ್ಕೆ,  ಈ   ಕಾದಂಬರಿಯನ್ನು  ಈ  ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ  ಆಯ್ಕೆಮಾಡಲಾಗಿದೆ ಎಂದು ಮೂವರು ತೀರ್ಪುಗಾರರ  ಆಯ್ಕೆ ಸಮಿತಿಯು ತಿಳಿಸಿರುತ್ತದೆ  ಎಂದು ಸ್ಪರ್ಧೆಯ ಸಂಚಾಲಕರಾದ ಪ್ರೊ. ಉಪೇಂದ್ರ ಸೋಮಯಾಜಿಯವರು ತಿಳಿಸಿರುತ್ತಾರೆ ಎಂಬುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!