ಬಿಜೆಪಿ-ಎಸ್ ಡಿಪಿಐ ಒಳ ಒಪ್ಪಂದ ಜಗಜ್ಜಾಹಿರ- ಉಡುಪಿ ಜಿಲ್ಲಾ ಕಾಂಗ್ರೆಸ್
ಉಡುಪಿ: ಕಳೆದ ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬಿಜೆಪಿ ಎಸ್ ಡಿಪಿಐ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಜನಜನಿತ. ಇದಕ್ಕೆ ಅಂಗೈ ಹುಣ್ಣಿಗೆ ಕನ್ನಡಿ ಬೇಕೇ ? ಪುರಾವೆ ಕೇಳುವ ಬಿಜೆಪಿ ಚುನಾವಣೆ ಸಮಯದಲ್ಲಿ ಎಸ್ ಡಿಪಿಐ ಅಭ್ಯರ್ಥಿಗಳಿಗೆ ಹಿಂಬಾಗಿಲಿಂದ ಆರ್ಥಿಕ ಸಹಾಯ ಹಾಗೂ ಅಧಿಕಾರದ ಚುಕ್ಕಾಣಿ ಹಿಡಿಯುವಾಗ ಹೊಂದಾಣಿಕೆಗಳು ಗುಟ್ಟಾಗಿ ಉಳಿದಿಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಮುಸ್ಲೀಂ ಸಮುದಾಯದ ಮೇಲಿನ ದ್ವೇಷದಿಂದ ಅವರ ಮತಗಳನ್ನು ವಿಭಜಿಸಲು ಬಿಜೆಪಿ ಈ ಹುನ್ನಾರ ನಡೆಸಿದೆ ˌಇದರ ಹಿಂದೆ ಮುಸ್ಲಿಂರನ್ನು ಏಕಾಂಗಿಯಾಗಿಸುವ ಹುನ್ನಾರವೂ ಅಡಗಿದೆ. ಎಸ್ಡಿಪಿಐ ಮಾತೃ ಸಂಘಟನೆಯಾದ ಪಿಎಫ್ ಐಯನ್ನು ನಿಷೇಧಿಸಿರುವುದೆ ಹೆಗ್ಗಳಿಕೆ ಎನ್ನುವ ಬಿಜೆಪಿಗೆ ಎಸ್ಡಿಪಿಐ ಯನ್ನು ನಿಷೇಧಿಸಲು ಮೀನ ಮೇಷವೇಕೆ ? ಮುಂದೊಂದುದಿನ ಅಧಿಕಾರ ಪಡೆಯಲು ಬೇಕಾಗಬಹುದೆಂಬ ಮುಂದಾಲೋಚನೆಯೇ ? ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪ್ರಶ್ನಿಸಿದ್ದಾರೆ.