ಸಾಲ ಮರುಪಾವತಿ ವಿನಾಯಿತಿ ಮುಂದುವರಿಕೆಯಿಲ್ಲ, ಚಕ್ರಬಡ್ಡಿ ಗ್ರಾಹಕರೇ ಭರಿಸಬೇಕಿದೆ: ಆರ್ ಬಿಐ
ನವದೆಹಲಿ: ದೇಶಾದ್ಯಂತ ಕೊರೋನಾ ವೈರಸ್ ಹಿನ್ನೆಲೆಯಲ್ಲಿ 6 ತಿಂಗಳ ಕಾಲ ಮುಂದೂಡಲಾಗಿದ್ದ ಸಾಲದ ಮೇಲಿನ ಇಎಂಐ ಪಾವತಿ ಇಂದಿನಿಂದ ಶುರುವಾಗಲಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಸಾಲ ಪಾವತಿ ಮುಂದೂಡುವುದು ತಾತ್ಕಾಲಿಕ ಪರಿಹಾರ, ಇದರಿಂದ ಬ್ಯಾಂಕ್ ಗಳಿಗೆ ಭಾರಿ ಸಮಸ್ಯೆಯಾಗಲಿದೆ. ಇದರಿಂದ ಸಾಲ ಮರುಪಾವತಿದಾರರಿಗೂ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಸೆ.1 ರಿಂದ ಸಾಲ ಮರುಪಾವತಿ ವಿನಾಯಿತಿ ಮುಂದುವರಿಸುವುದಿಲ್ಲ ಎಂದು ಹೇಳಿದ್ದಾರೆ.
ಕೊರೋನಾ ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಇಎಂಐ ವಿನಾಯಿತಿ ಮಾರ್ಚ್ ನಿಂದ ಆಗಸ್ಟ್ ವರೆಗೆ 6 ತಿಂಗಳು ಕಂತು ಕಟ್ಟಲು ವಿನಾಯಿತಿ ನೀಡಿ, ಇಎಂಐ ಪಾವತಿ ಮುಂದೂಡಿಕೆಗೆ ಅವಕಾಶ ನೀಡಲಾಗಿತ್ತು.
ಇದೀಗ ಈ ಅವಧಿ ಮುಗಿದಿದ್ದು, ಸೌಲಭ್ಯ ಬಳಸಿಕೊಂಡವರಿಗೆ ಬಡ್ಡಿಯ ಬರೆ ಬೀಳಲಿದೆ. ಪ್ರಸ್ತುತ ಬಡ್ಡಿ ವಿನಾಯಿತಿಗೆ ಆರ್ ಬಿಐ ಮತ್ತು ಕೇಂದ್ರ ಸರ್ಕಾರ ಒಪ್ಪದ ಕಾರಣ ವಿನಾಯಿತಿ ಅವಧಿಯ ಇಎಂಐ ಜೊತೆಯಲ್ಲಿ ಬಡ್ಡಿಗೆ ಚಕ್ರಬಡ್ಡಿಯನ್ನು ಗ್ರಾಹಕರೇ ಭರಿಸಬೇಕಿದೆ.