ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಆರೋಪಗಳ ಪತ್ರ ವೈರಲ್- ನಿಮ್ಮೊಂದಿಗೆ ನಾವಿದ್ದೇವೆ ಎಂದ ಸಿಬ್ಬಂದಿಗಳು
ಬೆಂಗಳೂರು, ಅ.18 : ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಅವರ ವಿರುದ್ಧ, ಅವರು ಕನ್ನಡ ಮಾತನಾಡುವವರನ್ನೇ ಟಾರ್ಗೇಟ್ ಮಾಡುತ್ತಿದ್ದಾರೆ ಎಂಬುದು ಸೇರಿದಂತೆ ವಿವಿಧ ಆರೋಪಗಳನ್ನು ಒಳಗೊಂಡ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದೆಡೆ ಡಿಸಿಪಿ ನಿಶಾ ಜೇಮ್ಸ್ ಅವರ ವಿರುದ್ಧದ ಆರೋಪಗಳ ಪತ್ರ ವೈರಲ್ ಆಗುತ್ತಿರುವ ಬೆನ್ನಲ್ಲೇ ಮತ್ತೊಂದೆಡೆ ಹಲವು ಪೊಲೀಸ್ ಸಿಬ್ಬಂದಿ ಡಿಸಿಪಿ ಬೆಂಬಲಿಸಿ ಅಭಿಯಾನ ಕೈಗೊಂಡಿದ್ದಾರೆ.
ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಕೆಲ ಸಿಬ್ಬಂದಿ ಆರೋಪ ಮಾಡಿದ್ದು, ಈ ಸಂಬಂಧ 32 ಪುಟಗಳ ದೂರಿನ ಪತ್ರವೊಂದನ್ನು ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ ಸಲೀಂ ಅವರಿಗೆ ಸಲ್ಲಿಸಲಾಗಿದೆ. ಸೆ.3 ರಂದು ಎಡಿಜಿಪಿಗೆ ನೀಡಿದ್ದ ದೂರಿನ ಪ್ರತಿ ಸಲ್ಲಿಸಿದ್ದು, ನಿಶಾ ಜೇಮ್ಸ್ ಅವರು ಕನ್ನಡದಲ್ಲಿ ವ್ಯವಹರಿಸುವುದಿಲ್ಲ, ಕನ್ನಡ ಮಾತಾಡುವ ಸಿಬ್ಬಂದಿಯನ್ನು ತುಚ್ಛವಾಗಿ ಕಾಣುತ್ತಾರೆ ಎಂಬ ಗಂಭೀರ ಆರೋಪವನ್ನು ಮಾಡಲಾಗಿದೆ. ಹಾಗೂ ಉದ್ದೇಶ ಪೂರಕವಾಗಿ ಸಾಮಾನ್ಯ ವಿಷಯಗಳನ್ನ ದೊಡ್ಡದಾಗಿ ಮಾಡಿ ಕಾನೂನು ಬಾಹಿರ ಶಿಸ್ತು ಕ್ರಮಕ್ಕೆ ಮುಂದಾಗುತ್ತಾರೆ. ಸಿಬ್ಬಂದಿಗಳನ್ನು ತಡರಾತ್ರಿವರೆಗೂ ಕಚೇರಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ. ಅಲ್ಲದೆ ಸಂಜೆ 6 ರ ನಂತರ ಕೆಲಸ ಶುರು ಮಾಡಿ ರಾತ್ರಿ 3ಕ್ಕೆ ಮುಗಿಸುತ್ತಾರೆ. ಇದರಿಂದ ಪತ್ನಿ ಮಕ್ಕಳು ಪೋಷಕರ ಜೊತೆ ಸಮಯ ಕಳೆಯಲು ಆಗುತ್ತಿಲ್ಲ. ಇದರೊಂದಿಗೆ ನಿದ್ರಾಹೀನತೆಯಿಂದ ಮರೆವು ಸೇರಿದಂತೆ ಹಲವು ಕಾಯಿಲೆ ಬರುತ್ತಿವೆ. ಅಷ್ಟೇ ಅಲ್ಲದೆ, 25 ಸಿಬ್ಬಂದಿಗೆ ವೇತನ ಭಡ್ತಿಯನ್ನು ತಡೆ ಹಿಡಿದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇನ್ನು ಈ ಆರೋಪಗಳ ನಡುವೆಯೂ ಹಲವು ಪೊಲೀಸ್ ಸಿಬ್ಬಂದಿ ಡಿಸಿಪಿ ನಿಶಾ ಜೇಮ್ಸ್ ಅವರಿಗೆ ಬೆಂಬಲ ಸೂಚಿಸಿದ್ದು, ತಮ್ಮ ವಾಟ್ಸಪ್ ಸ್ಟೇಟಸ್ ನಲ್ಲೂ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.