ಸಮುದಾಯದ ಅಭಿವೃದ್ಧಿಗಾಗಿ ಶಕ್ತಿ ಪ್ರದರ್ಶನಕ್ಕೆ ಸಿದ್ಧವಾದ ಬಿಲ್ಲವ ಸಂಘಟನೆ
ಮಂಗಳೂರು ಅ.17: ಬಿಲ್ಲವ, ಈಡಿಗ ಸೇರಿ 26 ಪಂಗಡಗಳ ಅಭಿವೃದ್ಧಿಗಾಗಿ ಹಾಗೂ ಈ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಸರಕಾರವನ್ನು ಆಗ್ರಹಿಸಿ ಬೃಹತ್ ಸಮಾವೇಷವನ್ನು ಹಮ್ಮಿಕೊಳ್ಳಲು ಬಿಲ್ಲವ ಸಂಘಟನೆಗಳು ನಿರ್ಧರಿಸಿವೆ.
ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಬಿಲ್ಲವ ಸಂಘಟನೆಗಳ ಪ್ರಮುಖರ ಸಭೆಯಲ್ಲಿ 2023ರ ಫೆಬ್ರುವರಿ ತಿಂಗಳಿನಲ್ಲಿ ನಗರದಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.
ಈ ವೇಳೆ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ್ ಅವರು ಮಾತನಾಡಿ, ಬಿಲ್ಲವ ಸಮಾಜದ ದಾರ್ಶನಿಕರನ್ನು ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿವೆ. ಆದರೆ, ಸಮುದಾಯದವರಿಗೆ ನಿಜಕ್ಕೂ ಸವಲತ್ತು ಸಿಗುತ್ತಿದೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.ಬಿಲ್ಲವರನ್ನು ಪ್ರವರ್ಗ 2ಎ ಅಡಿ ಸೇರಿಸಲಾಗಿದೆ. ಆದರೆ ಈಗಲೇ 100ಕ್ಕೂ ಅಧಿಕ ಜಾತಿಗಳು ಈ ಪ್ರವರ್ಗದಲ್ಲಿವೆ. ಈಗ ರಾಜ್ಯದ ಕೆಲವು ಪ್ರಬಲ ಜಾತಿಯವರು ತಮ್ಮನ್ನೂ ಪ್ರವರ್ಗ 2ಎಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಬಿಲ್ಲವರು ಮತ್ತಷ್ಟು ಸವಲತ್ತು ವಂಚಿತರಾಗಬೇಕಾದ ಸ್ಥಿತಿ ನಿರ್ಮಾಣವಾಗಬಹುದು. ಸಮುದಾಯಕ್ಕೆ ಸವಲತ್ತುಗಳು ಸಿಗಬೇಕಾದರೆ ಶಕ್ತಿ ಪ್ರದರ್ಶನ ಮಾಡುವ ಅಗತ್ಯವಿದೆ’ ಎಂದರು.
ಇದೇ ವೇಳೆ ಸಭೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮವನ್ನು ಸ್ಥಾಪಿಸಿ ಅದರಡಿ ಬಿಲ್ಲವರಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸಬೇಕು ಹಾಗೂ ಬಿಲ್ಲವರನ್ನು ಪ್ರವರ್ಗ 1ಕ್ಕೆ ಸೇರಿಸಬೇಕು ಎಂಬ ನಿರ್ಣಯಗಳನ್ನು ಈ ಹಿಂದೆ ಬ್ರಹ್ಮಾವರದಲ್ಲಿ ನಡೆದಿದ್ದ ಬಿಲ್ಲವರ ಸಮಾವೇಶದಲ್ಲಿ ಕೈಗೊಳ್ಳಲಾಗಿತ್ತು. ಈ ಬೇಡಿಕೆಗಳನ್ನು ಸರ್ಕಾರ ಇನ್ನೂ ಈಡೇರಿಸದ ಬಗ್ಗೆ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ರಾಜಶೇಖರ ಕೋಟ್ಯಾನ್, ಬ್ರಹ್ಮಶ್ರೀ ನಾರಾಯಣಗುರು ವಿಚಾರ ವೇದಿಕೆಯ ಸತ್ಯಜಿತ್ ಸುರತ್ಕಲ್, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಪೀತಾಂಬರ ಹೆರಾಟೆ, ಉಡುಪಿ ಬಿಲ್ಲವರ ವೇದಿಕೆ ಅಧ್ಯಕ್ಷ ಪ್ರವೀಣ್ ಕುಮಾರ್, ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷ ಜಯಂತ ನಡುಬೈಲ್, ಗೋಕರ್ಣನಾಥ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ವಿಶ್ವ ಮಹಿಳಾ ಸಂಘದ ಶ್ರೀಲತಾ, ಸಮಾಜದ ಪ್ರಮುಖರಾದ ಬೆಳ್ತಂಗಡಿಯ ಪದ್ಮನಾಭ ಮಾಣಿಂಜೆ, ಚಿದಾನಂದ ಎಲ್ಯಡ್ಕ, ವಿಜಯಾ ಅರುಣ್, ಸುಜಾತಾ, ರಾಜೇಂದ್ರ ಚಿಲಿಂಬಿ, ರವಿ ಚಿಲಿಂಬಿ, ಬೇಬಿ ಕುಂದರ್, ಸೂರ್ಯಕಾಂತ್, ಡಾ.ಅನಸೂಯ ಮತ್ತಿತರರು ಉಪಸ್ಥಿತರಿದ್ದರು.