ಅ.18 ರ ಟೋಲ್ ಸಂಗ್ರಹ ಕೇಂದ್ರದ ತೆರವು ಕಾರ್ಯಾಚರಣೆಗೆ ಕಾಪು ಬ್ಲಾಕ್ ಕಾಂಗ್ರೆಸ್ ಬೆಂಬಲ
ಉಡುಪಿ ಅ.17(ಉಡುಪಿ ಟೈಮ್ಸ್ ವರದಿ): ಜನ ವಿರೋಧಿಯಾಗಿ ಸುರತ್ಕಲ್ ನಲ್ಲಿ ಕಾರ್ಯಚರಿಸುತ್ತಿರುವ ಟೋಲ್ ಸಂಗ್ರಹಣೆಯ ಕೇಂದ್ರದ ತೆರವು ಕಾರ್ಯಾಚರಣೆಗೆ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸುವಂತೆ ಕರೆ ನೀಡಿದೆ.
ಈ ಬಗ್ಗೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಸುಮಾರು ಆರೇಳು ವರ್ಷಗಳಿಂದ ದಿನನಿತ್ಯ ಸಂಚರಿಸುವ ಕರಾವಳಿಯ ಉಭಯ ಜಿಲ್ಲೆಗಳ ಜನರ ರಕ್ತವನ್ನು ಸುಂಕ (ಟೋಲ್) ದ ರೂಪದಲ್ಲಿ ಹೀರಿ, ತುಳುನಾಡಿನ ಜನಸಾಮಾನ್ಯರಿಂದ ನೂರಾರು ಕೋಟಿ ಅಕ್ರಮ ವಸೂಲಿ ಮಾಡಿರುವ. ಈ ಹಗಲು ದರೋಡೆ ಕೇಂದ್ರವನ್ನು (ಅಕ್ರಮ ಟೋಲ್ ಗೇಟ್) ಯಾವುದೇ ಬೆಲೆ ತೆತ್ತಾದರೂ ರದ್ದುಗೊಳಿಸಲೇ ಬೇಕೆಂಬ ದಿಟ್ಟ ನಿರ್ಧಾರದಿಂದ ಟೋಲ್ ವಿರೋಧಿ ಹೋರಾಟ ಸಮಿತಿ ಹಾಗೂ ಇನ್ನಿತರ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಅ.18 ರಂದು ಬೆಳಿಗ್ಗೆ 9.30ಕ್ಕೆ ಹಮ್ಮಿಕೊಂಡಿರುವ ನಿರ್ಣಾಯಕ ಹಂತದ ಹೋರಾಟಕ್ಕೆ ಕಾಂಗ್ರೆಸ್ ಪಕ್ಷವು ಈ ಹಿಂದಿನಂತೆ ಸಂಪೂರ್ಣ ಬೆಂಬಲ ಘೋಷಿಸಿದೆ ಎಂದು ತಿಳಿಸಿದೆ.
ಹಾಗೂ ಈ ಹೋರಾಟದಲ್ಲಿ ಭಾಗವಹಿಸುವ ಸಲುವಾಗಿ, ಪಕ್ಷದ ಎಲ್ಲಾ ಮುಖಂಡರು, ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್ ಪದಾಧಿಕಾರಿಗಳು, ವಿವಿಧ ಸ್ತರದ ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಪಕ್ಷದ ವಿವಿಧ ಘಟಕ/ ಸಮಿತಿಗಳ ಅಧ್ಯಕ್ಷರು/ ಪದಾಧಿಕಾರಿಗಳು, ಎಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರು/ ಪದಾಧಿಕಾರಿಗಳು, ಎಲ್ಲಾ ಬೂತ್ ಸಮಿತಿ ಅಧ್ಯಕ್ಷರು/ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ನಾಗರಿಕ ಬಂಧುಗಳು ಹೆಜಮಾಡಿ ಟೋಲ್ ಗೇಟ್ ನ, ಹತ್ತಿರವಿರುವ “ಬಿಟ್ಟು ಧಾಬಾ” ದ ಬಳಿ ಬೆಳಿಗ್ಗೆ ಗಂಟೆ 8.30ಕ್ಕೆ ಬೃಹತ್ ಸಂಖ್ಯೆಯಲ್ಲಿ ಸೇರಿ, ಅಲ್ಲಿಂದ ಸುರತ್ಕಲ್ ಗೆ ತೆರಳುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಹೋರಾಟದಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನರ ಮೇಲೆ ನಡೆಯುತ್ತಿರುವ ಅನ್ಯಾಯ, ದಬ್ಬಾಳಿಕೆಯನ್ನು ಕೊನೆಗೊಳಿಸುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದೆ.