ಉಡುಪಿ: ಸಮಾಜ ಸೇವೆಗೆ ಜೆನೆಟ್ ಬಾರ್ಬೋಜಾರಿಗೆ ಅತ್ಯುತ್ತಮ ರಾಷ್ಟ್ರೀಯ ಮಹಿಳಾ ಪ್ರಶಸ್ತಿ
ಉಡುಪಿ ಅ.17: ಮಹಿಳಾ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ನೀಡಿದ ಸಮಾಜ ಸೇವೆಗೆ ಜೆನೆಟ್ ಬಾರ್ಬೋಜಾ ಮುದರಂಗಡಿ ಅವರಿಗೆ ಅತ್ಯುತ್ತಮ ರಾಷ್ಟ್ರೀಯ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ರಾಷ್ಟ್ರೀಯ ಸ್ತ್ರೀ ಆಯೋಗ, ಅಖಿಲ ಭಾರತೀಯ ಕೆಥೊಲಿಕ್ ಬಿಷಪ್ ಮಂಡಳಿ ವತಿಯಿಂದ ಲಕ್ಕೋದ ನವಿಂತಾ ಧರ್ಮ ಕೇಂದ್ರ ದಲ್ಲಿ ನಡೆದ 4ನೇ ರಾಷ್ಟ್ರ ಮಟ್ಟದ ಮಹಿಳಾ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ಬಿಷಪ್ ಮಂಡಳಿಯ ಅಧ್ಯಕ್ಷರಾದ ಪಾಂಡಿಚೇರಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ರೆ. ಫ್ರಾನ್ಸಿಸ್ ಕಾಲಿಸ್ತ್ ಹಾಗೂ ರಾಷ್ಟ್ರೀಯ ಸ್ತ್ರೀ ಆಯೋಗದ ಕಾರ್ಯದರ್ಶಿ ಭಗಿನಿ ಲಿಡ್ವಿನ್ ಫೆರ್ನಾಂಡಿಸ್ ಇವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಮಹಿಳಾ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡು ತಾಲೂಕು ಒಕ್ಕೂಟ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ರಚನೆ, ಸ್ತ್ರೀಯರ ಸಬಲೀಕರಣ, ರಾಜಕೀಯ ಹಾಗೂ ವಿವಿಧ ಸ್ತರಗಳಲ್ಲಿ ನೀಡಿದ ಸಮಾಜ ಸೇವೆಯನ್ನು ಪರಿಗಣಿಸಿ ಜೆನೆಟ್ ಬಾರ್ಬೋಜಾ ಮುದರಂಗಡಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಸಂಪದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ಉಡುಪಿ ಧರ್ಮಪ್ರಾಂತ್ಯ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟದ ನಿರ್ದೇಶಕರಾದ ವಂದನೀಯ ರೆಜಿನಾಲ್ಡ್ ಪಿಂಟೊ ಹಾಗೂ ಸಂಘಟನೆಯ ಮಾಜಿ ಅಧ್ಯಕ್ಷೆ ಜೂಡಿತ್ ಫೆನಾರ್ಂಡಿಸ್ ಉಪಸ್ಥಿತರಿದ್ದರು.