ಅ.18 ಸುರತ್ಕಲ್ ಟೋಲ್ ತೆರವು ಕಾರ್ಯಾಚರಣೆ- ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ
ಉಡುಪಿ ಅ.17(ಉಡುಪಿ ಟೈಮ್ಸ್ ವರದಿ): ಸುರತ್ಕಲ್ ಟೋಲ್ ತೆರವು ಕಾರ್ಯಾಚರಣೆಯ ಐತಿಹಾಸಿಕ ಹೋರಾಟ ಅ.18 ರಂದು ನಡೆಯಲಿದ್ದು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನತೆ ಭಾಗವಹಿಸುವಂತೆ ಸಿಪಿಐ-ಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅವರು ಕರೆ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಮಾ.22 ರಂದು ಲೋಕಸಭೆಯಲ್ಲಿ ಸಾರಿಗೆ ಸಚಿವ ನಿತಿನ್ ಗಡ್ಕರಿ ಯವರು ಕಾನೂನು ಬಾಹಿರವಾಗಿರುವ ಎಲ್ಲಾ ಟೋಲ್ ಗೇಟ್ ಗಳನ್ನು ಮುಚ್ಚುವುದಾಗಿ ಭರವಸೆ ನೀಡಿದ್ದರು. ಅವರು ನೀಡಿದ ಅವಧಿ ಮುಗಿದು 4 ತಿಂಗಳು ಕಳೆಯುತ್ತಾ ಬಂದರೂ ಸುರತ್ಕಲ್ ಟೋಲ್ ನಲ್ಲಿ ಕಾನೂನು ಬಾಹಿರವಾಗಿ ವಾಹನ ಸವಾರರಿಂದ ಟೋಲ್ ಹೆಸರಲ್ಲಿ ಹಣ ಲೂಟಿ ಮಾಡುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಾಗೂ ಶಾಸಕರು, ಸಂಸತ್ ಸದಸ್ಯರು ಹಾಗೂ ಈ ಜಿಲ್ಲೆಗಳ ಮೂವರು ಮಂತ್ರಿಗಳು ಹೇಳಿಕೆ ನೀಡುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂದು ಆರೋಪಿಸಿದರು.
ಸಾಕಷ್ಟು ಬಾರಿ ಉಡುಪಿ ಮತ್ತು ದ.ಕ. ಜಿಲ್ಲೆಯ ಸಾರ್ವಜನಿಕರು ಟೋಲ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ, ಧರಣಿ ನಡೆಸಿ ಸರಕಾರವನ್ನು ಎಚ್ಚರಿಸಿದರೂ ಸುಳ್ಳಿನ ಮೇಲೆ ಸುಳ್ಳಿನ ಭರವಸೆ ನೀಡುತ್ತಾ ಜನರನ್ನು ವಂಚಿಸುತ್ತಿದ್ದಾರೆ. ಆದರೆ ಟೋಲ್ ಗೇಟ್ ತೆರವು ಕಾರ್ಯಾಚರಣೆ ಪ್ರಕ್ರಿಯೆ ನಡೆದಿಲ್ಲ. ಈ ನಿಟ್ಟಿನಲ್ಲಿ ಅ.18 ರಂದು ಸುರತ್ಕಲ್ ಟೋಲ್ ತೆರವು ಕಾರ್ಯಾಚರಣೆಯ ಐತಿಹಾಸಿಕ ಹೋರಾಟ ನಡೆಯಲಿದ್ದು, ಈ ಹೋರಾಟದಲ್ಲಿ ಉಡುಪಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮನವಿ ಮಾಡಿಕೊಂಡರು.