ಅಸಂಘಟಿತ ಕಾರ್ಮಿಕರ ಇಎಸ್‌ಐ ಸೌಲಭ್ಯಕ್ಕಾಗಿ ಹೋರಾಟ: ಜಿ.ಎ.ಕೋಟೆಯಾರ್
ಉಡುಪಿ, ಅ.17: ದೇಶದಲ್ಲಿ 30-40ಕೋಟಿ ಸಂಖ್ಯೆಯಲ್ಲಿರುವ ವಿವಿಧ ವಾಹನ ಚಾಲಕರು, ಹೊರಗುತ್ತಿಗೆ ನೌಕರರು, ಬಿಸಿಯೂಟ ನೌಕರರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ವೈದ್ಯಕೀಯ ವಿಮಾ ಸೌಲಭ್ಯ(ಇಎಸ್‌ಐ) ಹಾಗೂ ಭವಿಷ್ಯ ನಿಧಿ ಒದಗಿಸಿಕೊಡುವ ನಿಟ್ಟಿನಲ್ಲಿ ಹೋರಾಟವನ್ನು ಕೈಗೆತ್ತಿ ಕೊಳ್ಳಲಾಗಿದೆ ಎಂದು ದಿ ಕಾಮನ್ ಪೀಪಲ್ ವೆಲ್‌ಫೇರ್ ಫೌಂಡೇಶನ್ ಸ್ಥಾಪಕ ಜಿ.ಎ. ಕೋಟೆಯಾರ್ ಹೇಳಿದ್ದಾರೆ.
ಉಡುಪಿಯ ಖಾಸಗಿ ಹೊಟೇಲ್‌ನಲ್ಲಿ ರವಿವಾರ ನಡೆದ ಭ್ರಷ್ಟಾಚಾರ ಮುಕ್ತ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸ್ಥಾಪಿಸ ಲಾದ ದಿ ಕಾಮನ್ ಪೀಪಲ್ ವೆಲ್‌ಫೇರ್ ಫೌಂಡೇಶನ್ ಇದರ ಉಡುಪಿ ಜಿಲ್ಲಾ ಪ್ರಥಮ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಸಾಕಷ್ಟು ಮಂದಿಗೆ ಮಾನವ ಹಕ್ಕುಗಳ ಬಗ್ಗೆ ಅರಿವು ಇಲ್ಲ. ಆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ವನ್ನು ನಡೆಸಲಾಗುವುದು. ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮ ಆದ್ಯತೆಯಲ್ಲಿ ಒಂದಾಗಿದೆ. ಅದೇ ರೀತಿ ಜನರಿಗೆ ವಿವಿಧ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಉದ್ದೇಶ ಕೂಡ ಹೊಂದಿದ್ದೇವೆ. ಗ್ರಾಹಕರ ಹಕ್ಕುಗಳು ಮತ್ತು ವಂಚನೆಗೆ ಒಳಗಾದ ಗ್ರಾಹಕರಿಗೆ ನ್ಯಾಯ ಒದಗಿಸಲು ಹೋರಾಟ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಗೀತಾ ಪೂಜಾರಿ, ನಿರ್ದೇಶಕರಾದ ಪ್ರವೀಣ್ ಕುಮಾರ್ ಶಿವಪುರ, ಸ್ಟಿಫನ್ ಇದ್ದರು.