ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟಗಾರರಿಗೆ ರಾತ್ರಿ ನೋಟಿಸ್- ತನಿಖೆಗೆ ಸೂಚನೆ
ಸುರತ್ಕಲ್, ಅ.16: ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಮುಖಂಡರಿಗೆ ಪೊಲೀಸರು ನೋಟಿಸ್ ನೀಡಿರುವ ಕುರಿತಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಟೋಲ್ ಗೇಟ್ ವಿರೋಧಿ ಹೋರಾಟಕ್ಕೆ ಸಂಬಂಧಿಸಿ ಪ್ರತಿಭಾ ಕುಳಾಯಿಯವರ ಮನೆಗೆ ಶನಿವಾರ ಮಧ್ಯರಾತ್ರಿ ಪೊಲೀಸರು ನೋಟಿಸ್ ನೀಡಲು ಆಗಮಿಸಿರುವ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದರು. ಮಹಿಳೆಯರು ಇರುವ ಮನೆಗೆ ಯಾರು ಬೇಕಾದರೂ ಮಧ್ಯರಾತ್ರಿ ಬಂದು ಬಾಗಿಲು ತಟ್ಟಬಹುದೇ? ಇದೆಂತಹ ಪ್ರಜಾಪ್ರಭುತ್ವ? ಎಂದು ಪ್ರಶ್ನಿಸಿ ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯಕ್ತರು, ಅ.18 ರಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಕುರಿತಾಗಿ ಸಮಿತಿಯ ಕೆಲ ಪ್ರಮುಖರು ‘ನೇರ ಕಾರ್ಯಾಚರಣೆ’ ಪದ ಬಳಕೆ ಮಾಡಿಕೊಂಡು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ಸಂಭಾವ್ಯ ಕಾನೂನು ಭಂಗವನ್ನುಂಟು ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ 16 ಮಂದಿ ಸಮಿತಿಯ ಮುಖಂಡರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅವರನ್ನು ಡಿಸಿಪಿ ಮುಂದೆ ಹಾಜರಾಗುವಂತೆ ಸಿ.ಆರ್.ಸಿ. ಕಾಲಂ 107ರ ಅನ್ವಯ ನ್ಯಾಯಾಲಯದ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯ ಖಾಸಗಿತನವನ್ನು ಗೌರವಿಸ ಬೇಕು ಮತ್ತು ಮಹಿಳೆಯರಿಗೆ ಹೆಚ್ಚು ಗೌರವಿಸಬೇಕು. ಪೊಲೀಸರು ಪ್ರತಿಭಾ ಕುಳಾಯಿಯವರ ನಿವಾಸಕ್ಕೆ ಮಧ್ಯರಾತ್ರಿ ಭೇಟಿ ನೀಡಿರುವ ಮತ್ತು ಅವರಿಗೆ ಪೊಲೀಸ್ ಇಲಾಖೆಯಿಂದ ಆಗಿರುವ ಸಮಸ್ಯೆಗಳ ಕುರಿತು ಪಣಂಬೂರು ವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ ಎಂದು ಕಮಿಷನರ್ ಹೇಳಿದ್ದಾರೆ.
ಮಹಿಳೆಯರು ಇರುವ ಮನೆಗೆ ಯಾರು ಬೇಕಾದರೂ ಮಧ್ಯರಾತ್ರಿ ಬಂದು ಬಾಗಿಲು ತಟ್ಟಬಹುದೇ? ಇದೆಂತಹ ಪ್ರಜಾಪ್ರಭುತ್ವ?”: ಪ್ರತಿಭಾ ಕುಳಾಯಿ
‘ಬಿಜೆಪಿ ಶಾಸಕ, ಸಂಸದ ಅವರು ಸುರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಂತಿದೆ. ಅ.18ರ ಟೋಲ್ ಗೇಟ್ ಹೋರಾಟವನ್ನು ಹತ್ತಿಕ್ಕಲು ನನ್ನ ಮನೆಗೆ ಮಧ್ಯರಾತ್ರಿ ಪೊಲೀಸರನ್ನು ಕಳುಹಿಸಿ ನೋಟಿಸ್ ನೀಡಿರುವ ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು. ನಾನೊಬ್ಬ ಸಾಮಾಜಿಕ ಕಾರ್ಯಕರ್ತೆಯೇ ಹೊರತು ಉಗ್ರಗಾಮಿ ಅಲ್ಲ. ನಾನೊಬ್ಬ ಭಾರತ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಈ ದೇಶದ ಕಾನೂನನ್ನು ಗೌರವಿಸುತ್ತೇನೆ. ನಿನ್ನೆ ಮಧ್ಯರಾತ್ರಿ ಸುರತ್ಕಲ್ ಠಾಣೆಯ 5 ಮಂದಿ ಪೊಲೀಸರು 11:45ಕ್ಕೆ ಕುಳಾಯಿಯಲ್ಲಿರುವ ನನ್ನ ಮನೆಗೆ ಬಂದಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ನನ್ನ ಮನೆಯಲ್ಲಿ 74 ವರ್ಷ ಪ್ರಾಯದ ನನ್ನ ಅತ್ತೆ ಇದ್ದು ಪೊಲೀಸರ ನಡವಳಿಕೆಯಿಂದ ಭಯಭೀತರಾಗಿದ್ದರು. ನಾನು ಮನೆಯಲ್ಲಿ ಇರದ ಕಾರಣ ನೋಟಿಸ್ ಪಡೆದು ಕೊಂಡಿಲ್ಲ. ನನ್ನ ಪ್ರಶ್ನೆ ಏನೆಂದರೆ ಮಂಗಳೂರು ನಿಜಕ್ಕೂ ಸುರಕ್ಷಿತವೇ? ಮಂಗಳೂರಿನಲ್ಲಿ ಮಹಿಳೆಯರು ಸುರಕ್ಷಿತರೇ? ಮಹಿಳೆಯರು ಇರುವ ಮನೆಗೆ ಯಾರು ಬೇಕಾದರೂ ಮಧ್ಯರಾತ್ರಿ ಬಂದು ಬಾಗಿಲು ತಟ್ಟಬಹುದೇ? ಇದೆಂತಹ ಪ್ರಜಾಪ್ರಭುತ್ವ?” ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದರು.