ಕಾಪು ಶಾಸಕರೇ ಎಸ್ಡಿಪಿಐ ಪ್ರಚಾರಕ್ಕೆ ಕರಪತ್ರ ಒದಗಿಸಿದ್ದು: ಸೊರಕೆ

ಉಡುಪಿ: ಸುರತ್ಕಲ್ ಟೋಲ್ ಅನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಮುನೀರ್ ಕಾಟಿಪಳ್ಳ ಅವರ ನೇತೃತ್ವದಲ್ಲಿ ವಾಹನ, ಬಸ್, ಆಟೋರಿಕ್ಷಾ ಸಂಘ, ಗ್ರಾಹಕ ಸಂಘದ ವತಿಯಿಂದ ಅ.18 ರಂದು ಟೋಲ್ ಗೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು

ಅವರು ಭಾನುವಾರ ನಗರದ ಡಯಾನ ಹೋಟೆಲಿನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು

2015 ರಲ್ಲಿ ಸುರತ್ಕಲ್ ಟೋಲ್ ನಲ್ಲಿ ಸುಂಕ ವಸೂಲಾತಿ ಆರಂಭಿಸಿದರು. ಹೆಜಮಾಡಿಯಲ್ಲಿ ಟೋಲ್ ಗೇಟ್ ಆಗುವವರೆಗೆ ಸುರತ್ಕಲ್ ಸುಂಕ ವಸುಲಾತಿ ನಡೆಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ. ಆದರೆ 2016 ರಲ್ಲಿ ಹೆಜಮಾಡಿ ಟೋಲ್ ಗೇಟ್ ಪ್ರಾರಂಭವಾದ ಬಳಿಕವೂ ಸುರತ್ಕಲ್ ಟೋಲ್ ಅನ್ನು ಸ್ಥಗಿತಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದ.ಕ ಲೋಕಸಭಾ ಸದಸ್ಯ ನಿರಂತರ ಆಶ್ವಾಸನೆ ನೀಡಿ ಟೋಲ್ ಮುಕ್ತಗೊಳಿಸುವಲ್ಲಿ ವಿಫಲರಾಗಿದ್ದಾರೆ. ಟೋಲ್ ಪಾವತಿಸಬೇಡಿ, ನಾನು ಜವಾಬ್ದಾರ ಎಂದು ಹೇಳಿದರೂ, ಅವರಿಂದ ಟೋಲ್ ಸ್ಥಗಿತಗೊಳಿಸುವ ಯಾವ ಕಾರ್ಯವು ಇದುವರೆಗೆ ಆಗಿಲ್ಲ. ಲೋಕೋಪಯೋಗಿ ಇಲಾಖಾ ಮಂತ್ರಿ ಸಿಸಿ ಪಾಟೀಲ್, ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಸುರತ್ಕಲ್ ಟೋಲ್ ಸ್ಥಗಿತಗೊಳಿಸುವ ಬಗ್ಗೆ ಉಲ್ಲೇಖಿಸಿದ್ದಾರೆ, ಆದರೆ ಯಾವುದೇ ಫಲಿತಾಂಶ ಹೊರಬಂದಿಲ್ಲ ಎಂದು ವ್ಯಂಗಿಸಿದರು.

ಅವಿಭಜಿತ ದ.ಕ ಜಿಲ್ಲೆಯೊಂದಿಗೆ ಉಡುಪಿಯ ಜನತೆಯ ನಂಟು ಇದೆ. ಪ್ರತಿದಿನ ಮಂಗಳೂರಿಗೆ ವಾಹನದಲ್ಲಿ ಓಡಾಡುವವ ಸಂಖ್ಯೆ ಹೆಚ್ಚಿದೆ. ಆದರೆ ಉಡುಪಿಯ ಜನತೆಯ ದುರದೃಷ್ಟ ಇದಾಗಿದ್ದು, ಹೆಜಮಾಡಿ ಮತ್ತು ಸುರತ್ಕಲ್ ನಲ್ಲಿ ಟೋಲ್ ಪಾವತಿಸುವ ದುಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ ಎಂದವರು ಹೇಳಿದರು

ಟೋಲ್ ನಲ್ಲಿ ಸುಂಕ ವಸೂಲಿ ಮಾಡುವವರು, ಗುತ್ತಿಗೆ ಪಡೆದವರೊಂದಿಗೆ ಆಡಳಿತರೂಢ ಪಕ್ಷದ ಸದಸ್ಯರು ಪಾಲುದಾರರಾಗಿದ್ದಾರೆ. ಹೆಜಮಾಡಿಯಲ್ಲಿ ಟೋಲ್ ಬಗ್ಗೆ ಪ್ರತಿಭಟನೆ ನಡೆದಾಗ ಆಡಳಿತ ಪಕ್ಷದವರು ಭಾಗವಹಿಸಿದ್ದರು. ಅವರು ಪ್ರತಿಭಟನೆ ನಿಷ್ಕ್ರಿಯಗೊಳಿಸಲು ನಮ್ಮೊಂದಿಗೆ ಕೈ ಜೋಡಿಸಿದ್ದರು. ಈಗ ಟೋಲ್ ಹೋರಾಟವು ತುಳುನಾಡು v/s ಬಿಜೆಪಿಯಾಗಿದೆ ಎಂದು ಆರೋಪಿಸಿದರು.

ಸುರತ್ಕಲ್ ಟೋಲ್ ಮುತ್ತಿಗೆ ಹೋರಾಟದಲ್ಲಿ ಸರ್ವ ಜನರು ಮುತ್ತಿಗೆಯಲ್ಲಿ ಭಾಗವಹಿಸಬೇಕು. ನಾವು ಎಲ್ಲದಕ್ಕೂ ತಯಾರಾಗಿಯೇ ಮುತ್ತಿಗೆ ಹಾಕಲು ಸಿದ್ದತೆ ನಡೆಸಿದ್ದೇವೆ. ಪೋಲಿಸ್ ಇಲಾಖೆ ಯಾವುದನ್ನು ಹತ್ತಿಕ್ಕುತ್ತದೆ ಎಂದು ಗಮನಿಸುತ್ತಿದ್ದೇವೆ. ಪೋಲಿಸರು ಗುತ್ತಿಗೆದಾರರ ಹಿತಾಸಕ್ತಿ ಕಾಯುತ್ತಾರೆಯೋ, ಸಾರ್ವಜನಿಕರ ಹಿತರಕ್ಷಣೆಯಾ ಮಾಡುತ್ತಾರೆಯೋ ಎಂದು ಪ್ರಶ್ನಿಸಿದರು. 

ಎಸ್.ಡಿ.ಪಿ.ಐ ವಿಚಾರ

ಪಿ.ಎಫ್.ಐ ನ ಮತ್ತು ಎಸ್.ಡಿ.ಪಿ.ಐ ಒಂದು ನಾಣ್ಯದ ಎರಡು ಮುಖಗಳು. ಕಾಪು ಪುರಸಭೆ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಪರವಾಗಿ ಪಿ.ಎಫ್.ಐ ಕೆಲಸ ಮಾಡಿದೆ. ಕಾಪು ಶಾಸಕರೇ ಎಸ್.ಡಿ.ಪಿ.ಐ ನವರಿಗೆ ಪ್ರಚಾರ ಕರಪತ್ರವನ್ನು ಒದಗಿಸಿದ್ದಾರೆ. ಒಟ್ಟಿಗೆ ನಾಮೀನೇಷನ್ ಮಾಡಿ, ಒಟ್ಟಿಗೆ ವಿಜಯೋತ್ಸವ ಮಾಡಿದ್ದಾರೆ ಎಂದು ಆರೋಪಿಸಿದರು.

ಭಾರತ್ ಜೋಡೋ ವಿಚಾರ

ದೇಶದಲ್ಲಿ ನಿರುದ್ಯೋಗ, ರೈತರ ಸಮಸ್ಯೆ, ಮಹಿಳೆ ಸಮಸ್ಯೆಗಳನ್ನು ಆಲಿಸಲು ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡುತ್ತಿದ್ದಾರೆ. ಮೋಹನ್ ದಾಸ್ ಕರಮಚಂದ್ ಗಾಂಧಿಯವರ ಹಾದಿಯಲ್ಲಿ ನಡೆಯುತ್ತಿದ್ದಾರೆ.ನೊಂದವರಿಗೆ ಸಾಂತ್ವನ ಹೇಳುತ್ತಿದ್ದಾರೆ. ತಾಯಿಯ ಪ್ರೀತಿಯನ್ನು ನೀಡುವ ಕೆಲಸ ಆಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನವೀನ್ ಚಂದ್ರ ಸುವರ್ಣ, ಜಿತೇಂದ್ರ ಪುಟೋರ್ಡೊ, ಸಂತೋಷ್ ಕುಲಾಲ್, ಚರಣ್ ವಿಠ್ಠಲ್ ಉಪಸ್ಥಿತರಿದ್ದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪ್ರಮೋದ್ ಮಧ್ವರಾಜ್ ಬಗ್ಗೆ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ನನ್ನ ಮಂತ್ರಿ ಪದವಿ ತೆಗೆದು ಅವರನ್ನು ಮಂತ್ರಿ ಮಾಡಿದ್ದಾರೆ. ಅವರ ತಾಯಿ ಬಿಜೆಪಿಗೆ ಹೋಗಿದ್ದಾಗ ಅವರನ್ನು ಕಾಂಗ್ರೆಸ್ ನಲ್ಲಿ ಉಳಿಸಿಕೊಂಡು ನನ್ನ ಶಿಫಾರಸಿನ ಮೇರೆಗೆ ಬ್ರಹ್ಮಾವರದಲ್ಲಿ ಅಭ್ಯರ್ಥಿಯಾದರು. ಅವರು ಜೆ.ಡಿ.ಎಸ್. ನಲ್ಲಿ ನಿಂತಾಗ ನಾವು ಪ್ರಚಾರ ಮಾಡಿದ್ದೇವೆ. ಚುನಾವಣಾ ಪ್ರಚಾರದಲ್ಲಿ ನನ್ನ ಮಂತ್ರಿ ಪದವಿ ಹೋಗಲು ಪ್ರಮೋದ್ ಮಧ್ವರಾಜ್ ಕಾರಣ ಅಲ್ಲ ಎಂದು ಜನರಿಗೆ ವಿವರಿಸಿದ್ದೇನೆ ಎಂದರು

1 thought on “ಕಾಪು ಶಾಸಕರೇ ಎಸ್ಡಿಪಿಐ ಪ್ರಚಾರಕ್ಕೆ ಕರಪತ್ರ ಒದಗಿಸಿದ್ದು: ಸೊರಕೆ

  1. ನೀವು ಯಾರಿಗೆ ಸಹಾಯ ಮಾಡಿದ್ದೀರೋ ಅವರು ಚುನಾವಣಾ ಸಮಯದಲ್ಲಿ ನಿಮಗೆ ದ್ರೋಹ ಮಾಡಿದ್ದಾರೆ. ನಿಮ್ಮ ವೈಫಲ್ಯಗಳನ್ನು ಮರೆಮಾಡಲು ಇತರರನ್ನು ದೂಷಿಸಬೇಡಿ

Leave a Reply

Your email address will not be published. Required fields are marked *

error: Content is protected !!