ಟೋಲ್ ಗೇಟ್ ವಿರುದ್ಧ ಹೋರಾಟ ಹತ್ತಿಕ್ಕುವ ಉದ್ದೇಶ ನಮಗಿಲ್ಲ- ನಳಿನ್
ಮಂಗಳೂರು, ಅ.16: ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿ ಹೋರಾಟಗಾರರ ಮನೆಗೆ ರಾತ್ರಿ ತೆರಳಿ ಪೊಲೀಸರು ನೋಟಿಸ್ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಹಾಗೆ ಒಂದು ವೇಳೆ ಅಧಿಕಾರಿಗಳು ರಾತ್ರಿ ತೆರಳಿ ಹೋರಾಟಗಾರರ ಮನೆಗೆ ತೆರಳಿ ನೋಟಿಸ್ ನೀಡಿದ್ದರೆ ಅದು ಸರಿಯಲ್ಲ ಎಂದು ಸಂಸದ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದರು, ಕೆಲವೊಂದು ತಾಂತ್ರಿಕ ಕಾರಣಗಳಿಂದ ಸುರತ್ಕಲ್ ಟೋಲ್ ಗೇಟ್ ತೆರವು ಕಾರ್ಯ ವಿಳಂಬವಾಗಿದೆ. ಈ ಟೋಲ್ ಗೇಟ್ ತೆರವುಗೊಳಿಸುವ ಬಗ್ಗೆ ಸಂಬಂಧ ಪಟ್ಟವರ ಜೊತೆ ಮಾತುಕತೆ ನಡೆದಿದೆ. ಆದರೆ ಟೋಲ್ ಗೇಟ್ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವ ಯಾವ ಉದ್ದೇಶ ನಮಗಿಲ್ಲ. ಹೋರಾಟಗಾರರ ಹೋರಾಟಕ್ಕೆ ನಮ್ಮ ವಿರೋಧವಿಲ್ಲ ಎಂದರು.
ಕೆಲವೊಂದು ತಾಂತ್ರಿಕ ಕಾರಣಗಳಿಂದ ತೆರವು ಕಾರ್ಯಾಚರಣೆ ವಿಳಂಬವಾಗಿದೆ. ಹೋರಾಟಗಾರರು ಇದನ್ನು ಅರ್ಥ ಮಾಡಿಕೊಂಡು ಸ್ವಲ್ಪ ಕಾಲಾವಕಾಶ ನೀಡುವ ಅಗತ್ಯವಿದೆ ಎಂದು ಮನವಿ ಮಾಡುವುದಾಗಿ ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.