ಜನರ ಬೆವರಿನ ಹಣ ಲೂಟಿಗಯ್ಯಲು ಸುರತ್ಕಲ್ ಟೋಲ್ ಇನ್ನೇಷ್ಟು ದಿನ ಮುಂದೂಡುತ್ತಿರಿ?- ಕೆ.ಕೃಷ್ಣಮೂರ್ತಿ ಆಚಾರ್ಯ
ಉಡುಪಿ ಅ.16(ಉಡುಪಿ ಟೈಮ್ಸ್ ವರದಿ): ಕೇಂದ್ರ ಹೆದ್ದಾರಿ ಸಚಿವರು ಘೋಷಿಸಿದ 60 ಕಿಲೋ ಮೀಟರ್ ಗೆ ಒಂದು ಟೋಲ್ ಸಂಗ್ರಹ ಕೇಂದ್ರ ಎಂಬ ನಿಯಮ ಮಂಗಳೂರು ಮತ್ತು ಉಡುಪಿಯಲ್ಲಿ ಅನ್ವಯಿಸುವುದಿಲ್ಲವೇ ಎಂದು ಕಾಂಗ್ರೆಸ್ ಮುಖಂಡ, ಉಡುಪಿ ಕಾಂಗ್ರೆಸ್ ನ ಪ್ರಚಾರ ಸಮಿತಿಯ ಅಧ್ಯಕ್ಷ ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ ಅವರು ಸರಕಾರವನ್ನು ಪ್ರಶ್ನಿಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ನ್ನು ಇನ್ನೂ ಕೂಡಾ ತೆರವು ಗೊಳಿಸದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಕಳೆದ ಆರೇಳು ವರ್ಷಗಳಿಂದ 400 ಕೋ. ಗೂ ಅಧಿಕ ಟೋಲ್ ಸಂಗ್ರಹಿಸಿರುವ ಸುರತ್ಕಲ್ ಟೋಲ್ ಕೇಂದ್ರ ವನ್ನು ತತ್ ತಕ್ಷಣದಿಂದ ರದ್ದುಗೊಳಿಸುವಂತೆ ಆದೇಶವಿದ್ದರೂ ರಾಜಕೀಯ ಮುಖಂಡರ ಹಣ ದಾಹಕ್ಕೆ ಕಳೆದ ಹಲವಾರು ತಿಂಗಳುಗಳಿಂದ ಕೋಟ್ಯಾಂತರ ರೂ ವಾಹನ ಸವರರ ಹಣವನ್ನು ದರೋಡೆ ಎಂಬಂತೆ ಸಂಗ್ರಹಿಸಿದ್ದಾರೆ. ಈ ಜನ ವಿರೋಧಿ ನೀತಿಯನ್ನು ಖಂಡಿಸಿ ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿಯವರು ವಿವಿಧ ಮನವಿ ಪ್ರತಿಭಟನೆ ಹಮ್ಮಿಕೊಂಡು ಟೋಲ್ ಸಂಗ್ರಹ ಕೇಂದ್ರವನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದರು. ಆದರೆ ಇದೆಲ್ಲಕ್ಕೂ ಕ್ಯಾರೆಯೆನ್ನದ ಸರ್ಕಾರ ಜನರ ಬೆವರಿನ ಹಣವನ್ನು ಲೂಟಿಗಯ್ಯಲು ಇನ್ನಷ್ಟು ದಿನ ಮುಂದೂಡಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಹಾಗೂ ಕಳೆದ ತಡರಾತ್ರಿ ಹೋರಾಟಗಾರರ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಪೊಲೀಸರು ನೋಟೀಸು ನೀಡುವ ನೆಪದಲ್ಲಿ ಹೋರಾಟಗಾರರನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ಒಂದೆಡೆ ಕೇಂದ್ರ ಹೆದ್ದಾರಿ ಸಚಿವರು 60 ಕಿಲೋ ಮೀಟರ್ ಗೆ ಒಂದು ಟೋಲ್ ಕೇಂದ್ರ ಎಂದು ಘೋಷಿಸಿದ್ದಾರೆ. ಆದರೆ ಈ ನಿಯಮ ಮಂಗಳೂರು ಮತ್ತು ಉಡುಪಿಯಲ್ಲಿ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಅವರು, ಕೇಂದ್ರ ರಾಜ್ಯ ಸರ್ಕಾರ ಬಿಜೆಪಿ ಆಡಳಿತ ವಿದ್ದರೂ ಯಾವುದೇ ಸಾಮಾನ್ಯ ಜನರ ಬಗ್ಗೆ ಕಾಳಜಿ ಇಲ್ಲದೆ ಈ ರೀತಿ ವರ್ತನೆ ಖಂಡನೀಯ. ಈ ಬಗ್ಗೆ ಜನರು ಸರಕಾರದ ವಿರುದ್ಧ ತೀವ್ರತರದ ಹೋರಾಟಕ್ಕೆ ಸಜ್ಜಾಗಬೇಕು. ಜನರು ಬೀದಿಗಿಳಿದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಮ್ಮ ನ್ಯಾಯತವಾದ ಬೇಡಿಕೆ ಈಡೇರಿಸಿಕೊಳ್ಳಲು ಮುಂದೆ ಬರಬೇಕೆಂದು ಮನವಿ ಮಾಡಿಕೊಂಡರು.