ಉಡುಪಿ: ಬನ್ನಂಜೆಯ ನಿವೃತ್ತ ಬ್ಯಾಂಕ್ ಉದ್ಯೋಗಿಗೆ 10 ಲಕ್ಷ ರೂ. ವಂಚನೆ
ಉಡುಪಿ ಅ.15(ಉಡುಪಿ ಟೈಮ್ಸ್ ವರದಿ): ತನ್ನ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದ ಮನೆ ಮಾಲಿಕನಿಗೆ, ಅವಕಾಶ ದುರುಪಯೋಗ ಪಡಿಸಿಕೊಂಡು ಲಕ್ಷಾಂತರ ರೂ. ವಂಚಿಸಿರುವ ಘಟನೆ ಉಡುಪಿ ಬನ್ನಂಜೆಯಲ್ಲಿ ನಡೆದಿದೆ.
ಈ ಬಗ್ಗೆ ವಂಚನೆಗೊಳಗಾದ ಎಂ.ಬಾಲಕೃಷ್ಣ ನಾಯಕ್(79)ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ನಿವೃತ್ತಿ ಬಳಿಕ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಇದೇ ಕಾರಣದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡಿಕೊಂಡಿರುವ ಹಾವೇರಿ ಜಿಲ್ಲೆಯ ರಮೇಶ್ ಮತ್ತು ಆತನ ಪತ್ನಿಗೆ ಉಚಿತ ರೂಮ್ ನೀಡಿ ವಾಸಿಸಲು ಅವಕಾಶ ಮಾಡಿ ಕೊಟ್ಟಿದ್ದರು. ಆದರೆ ಆರೋಪಿ ರಮೇಶ ಜು.4 ರಿಂದ ಅ.10 ರ ನಡುವಿನ ಅವಧಿಯಲ್ಲಿ ಎಂ ಬಾಲಕೃಷ್ಣ ನಾಯಕ್ ಅವರ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಒಟಿಪಿ ಬಳಸಿಕೊಂಡು ಬೇರೆ ಬೇರೆ ದಿನಗಳಲ್ಲಿ ವಿವಿಧ ಎಟಿಎಂಗಳಿಂದ ಒಟ್ಟು ರೂ.9,75,500 ಹಣವನ್ನು ಡ್ರಾ ಮಾಡಿ ವಂಚನೆ ಮಾಡಿರುತ್ತಾರೆ. ಅಲ್ಲದೆ ಈ ನಡುವೆ ಮನೆಯಲ್ಲಿ 2 ಚಿನ್ನದ ಉಂಗುರಗಳು ಕಾಣೆಯಾಗಿದ್ದು, ಇವುಗಳನ್ನೂ ಸಹ ಆರೋಪಿತನು ತೆಗೆದುಕೊಂಡು ಹೋಗಿರುವ ಬಗ್ಗೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.