ಬಳ್ಳಾರಿ: ರಾಹುಲ್ ಗಾಂಧಿ ನೇತೃತ್ವ ಭಾರತ್ ಜೋಡೊ ಯಾತ್ರೆಗೆ ಭಾರಿ ಜನ ಬೆಂಬಲ ವ್ಯಕ್ತ
ಬಳ್ಳಾರಿ ಅ.15: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃದ ಭಾರತ್ ಜೋಡೊ ಯಾತ್ರೆಗೆ ಇಂದು ಬಳ್ಳಾರಿಯಲ್ಲಿ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ.
ಇಂದು ಬೆಳಿಗ್ಗೆ ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕನನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಜೈಕಾರದ ಘೋಷಣೆಗಳನ್ನು ಕೂಗಿದರು. ಯಾತ್ರೆಯ ನಡುವೆ ಜನರನ್ನು ಮಾತನಾಡಿಸುತ್ತಾ ಸಾಗುತ್ತಿದ್ದ ರಾಹುಲ್ ಗಾಂಧಿ ಅವರಿಗೆ ದಾರಿ ಮಧ್ಯದಲ್ಲಿ ಲಂಬಾಣಿ ಮಹಿಳೆಯೊಬ್ಬರು ಲಂಬಾಣಿ ಕಸೂತಿ ಇದ್ದ ಶಲ್ಯವನ್ನು ಕೊರಳಿಗೆ ಹಾಕಿ ಗೌರವ ಸೂಚಿಸಿದರು.
ಈ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕರ್ನಾಟಕ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣಜಿತ್ ಸುರ್ಜೆವಾಲ, ವೇಣುಗೋಪಾಲ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ವಿ.ಎಸ್. ಉಗ್ರಪ್ಪ, ಶಾಸಕರಾದ ಬಿ. ನಾಗೇಂದ್ರ, ಗಣೇಶ್ ಇದ್ದರು. ಬಳಿಕ ಬಳ್ಳಾರಿ ಎಪಿಎಂಸಿ ಮಾರುಕಟ್ಟೆ ಬಳಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್, ಶಾಸಕ ದಿನೇಶ್ ಗುಂಡೂರಾವ್ ಮತ್ತಿತರರು ಜೊತೆಯಾದರು.
ಇದೇ ವೇಳೆ ರಸ್ತೆಯ ಮೇಲೆ ರಂಗೋಲಿಯಲ್ಲಿ ರಾಹುಲ್ ಗಾಂಧಿ ಚಿತ್ರ ಬಿಡಿಸಿದ ಕಲಾವಿದೆಯೊಬ್ಬರನ್ನು ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು. ಈ ವೇಳೆ ಯಾತ್ರೆಯಲ್ಲಿ ರಸ್ತೆ ಉದ್ದಕ್ಕೂ ಜಾನಪದ ಕಲಾ ತಂಡಗಳು ಉತ್ಸಾಹದಿಂದ ಗ್ರಾಮೀಣ ವಾದ್ಯಗಳನ್ನು ಬಾರಿಸುವ ಮೂಲಕ ರಾಹುಲ್ ಗಾಂಧಿ ಅವರಿಗೆ ಮನರಂಜನೆ ನೀಡಿದರು.
ಈ ಯಾತ್ರೆಯು ಎಪಿಎಂಸಿ, ಬಂಡಿಮೋಟ್, ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ಮೀನಾಕ್ಷಿ ಸರ್ಕಲ್, ಗಡಗಿ ಚನ್ನಪ್ಪ ಸರ್ಕಲ್, ಈಡಿಗಾ ಹಾಸ್ಟೆಲ್ ಮೂಲಕ ಹಾದು ಕೋರ್ಟ್ ರಸ್ತೆಯಲ್ಲಿರುವ ಕಮ್ಮಾ ಭವನಕ್ಕೆ ಬಂದು ವಿಶ್ರಾಂತಿ ಪಡೆಯಲಾಯಿತು. ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಅಪಾರ ಜನಸಾಗರದ ಜೊತೆಗೆ ಡೊಳ್ಳು,ಕೊಂಬು, ಕಹಳೆ, ನಂದಿ ಧ್ವಜ ಕುಣಿತ, ವೀರಗಾಸೆ ಕುಣಿತದ ತಂಡಗಳು ಭಾಗವಹಿಸಿದ್ದವು.