ಕೋಟ: ಫಿಶ್ ಕಟ್ಟಿಂಗ್ ಶೆಡ್ ಹಾಗೂ ಸಂಸ್ಕರಣಾ ಘಟಕ ಸ್ಥಗಿತಕ್ಕೆ ರಾಷ್ಟ್ರೀಯ ಹಸಿರು ಪೀಠ ಆದೇಶ
ಕೋಟ, ಅ.15: “ಹಂಗಾರಕಟ್ಟೆಯ ಬಾಳ್ಕುದು ಶಾಲೆ ಸಮೀಪ ಕಾರ್ಯಾಚರಿಸುತ್ತಿದ್ದ ಫಿಶ್ ಕಟ್ಟಿಂಗ್ ಶೆಡ್ ಹಾಗೂ ಸಂಸ್ಕರಣಾ ಘಟಕವನ್ನು ಸ್ಥಗಿತಗೊಳಿಸುವಂತೆ ರಾಷ್ಟ್ರೀಯ ಹಸಿರು ಪೀಠ ಆದೇಶ ನೀಡಿದೆ ಎಂದು ಬಾಳ್ಕುದು ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸುರೇಶ್ ಅಡಿಗ ಅವರು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸಿ.ಆರ್.ಝಡ್ ವಲಯ, ಮಾಲಿನ್ಯ ಸಮಸ್ಯೆ, ಶೈಕ್ಷಣಿಕ ಸಂಸ್ಥೆಯ ವಠಾರ ಮುಂತಾದ ಕಾರಣ ಪರಿಗಣಿಸಿ ಹಸಿರು ಪೀಠ ನಮ್ಮ ಮನವಿ ಪುರಸ್ಕರಿಸಿ ತೀರ್ಪು ನೀಡಿದೆ. ನಮ್ಮ ಹೋರಾಟಕ್ಕೆ ಶಾಶ್ವತ ಜಯ ಸಿಗಬೇಕೆಂಬ ಕಾರಣಕ್ಕೆ ಸುಪ್ರಿಂಕೋರ್ಟ್ ನಲ್ಲಿ ಈ ಕುರಿತು ಕೆ-ವಿಟ್ ಅರ್ಜಿ ಸಲ್ಲಿಸಲಾಗಿದೆ. ಕುಂದಾಪುರ ನ್ಯಾಯಾಲಯ ಹಾಗೂ ಹೈಕೋರ್ಟ್ ನಲ್ಲಿ ಈ ಕುರಿತು ಮೊಕದ್ದಮೆ ವಿಚಾರಣೆ ಹಂತದಲ್ಲಿದ್ದು, ಹಸಿರು ಪೀಠದ ಆದೇಶದ ಪ್ರತಿಯನ್ನಿರಿಸಿ ಶಾಶ್ವತ ನ್ಯಾಯ ಕೋರಲಾಗುವುದು ಎಂದರು.
ಈ ವಿಚಾರವಾಗಿ ಮಾತನಾಡಿದ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಇಬ್ರಾಹಿಂ ಸಾಹೇಬ್ ಅವರು, 2015 ರಿಂದ ಇಡೀ ಗ್ರಾಮಸ್ಥರು ಒಟ್ಟಾಗಿ ಹೋರಾಟ ನಡೆಸುತ್ತಿದ್ದೇವೆ. ಸುಮಾರು 1,500 ಮಂದಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೆವು. ಲಕ್ಷಾಂತರ ರೂ. ಹಣವನ್ನು ದೇಣಿಗೆ ಮೂಲಕ ಸಂಗ್ರಹಿಸಿ ಹೋರಾಟಕ್ಕೆ ವ್ಯಯಿಸಿದ್ದೇವೆ ಎಂದು ತಿಳಿಸಿದರು.
ಇನ್ನು ಈ ವೇಳೆ ಹಿತರಕ್ಷಣಾ ಸಮಿತಿಯ ಉಪಾಧ್ಯಕ್ಷ ಡೆನ್ನಿಸ್ ಡಿ’ಸೋಜಾ ಅವರು ಮಾತನಾಡಿ, ವಿವಿಧ ಇಲಾಖೆಯ ಅಧಿಕಾರಿಗಳು ಅಧಿಕಾರ ದುರುಪಯೋಗ ಪಡಿಸಿಕೊಂಡು ಈ ಕಾರ್ಖಾನೆಗೆ ಈ ಹಿಂದೆ ಅನುಮತಿ ನೀಡಿದ್ದರು. ಎಲ್ಲಾ ಅಧಿಕಾರಿಗಳ ಕರ್ತವ್ಯಲೋಪವನ್ನು ಹಸಿರು ಪೀಠ ಎತ್ತಿ ಹಿಡಿದಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದ ಪ್ರಕರಣ ದಾಖಲಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿತರಕ್ಷಣಾ ಸಮಿತಿಯ ಕಾರ್ಯದರ್ಶಿ ರವೀಂದ್ರ ಸುವರ್ಣ, ಹಸಿರು ಪೀಠದಲ್ಲಿ ಮೊಕದ್ದಮೆ ದಾಖಲಿಸಿದ ಶ್ರೀಕಾಂತ್ ಮಧ್ಯಸ್ಥ ಗ್ರಾ.ಪಂ. ಸದಸ್ಯ ಸುಬ್ರಹ್ಮಣ್ಯ ಆಚಾರ್ಯ, ಅಶ್ವಿನಿ ಕೆ, ಕಿರಣ್ ಥೋಮಸ್, ಸುಲೋಚನ, ಅನಸೂಯ, ಮಾಜಿ ಸದಸ್ಯೆ ಇಂದಿರಾ, ದೀಪಾ, ಹಿತರಕ್ಷಣಾ ಸಮಿತಿಯ ರಾಧಾಕೃಷ್ಣ ನಾಯಕ್, ಗಣೇಶ್ ದೇವಾಡಿಗ, ಸತೀಶ್ ಉಪಸ್ಥಿತರಿದ್ದರು.