ಸಂಘಟನೆ, ಕ್ರಿಯಾಶೀಲತೆಯಿಂದ ಪಂಚಾಯತ್ ಚುನಾವಣೆ ಎದುರಿಸಿ: ಕೋಟ
ಉಡುಪಿ: ಕೋವಿಡ್-19ರ ಪರಿಣಾಮವಾಗಿ ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮುಂದೂಡಲಾಗಿದ್ದು ಶೀಘ್ರದಲ್ಲೇ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಗ್ರಾ.ಪಂ. ಚುನಾವಣೆ ನಡೆಯುವ ಎಲ್ಲಾ ಸಾಧ್ಯತೆಗಳಿವೆ. ಸದ್ರಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಪಕ್ಷದ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ ಸಂಘಟನೆ, ಕ್ರಿಯಾಶೀಲತೆ ಮತ್ತು ಪರಿಣಾಮಕಾರಿ ಅಗತ್ಯ ಚಟುವಟಿಕೆಗಳಿಂದ ಗೆಲುವಿನ ಗುರಿಯತ್ತ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಛೇರಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಮೋರ್ಚಾ-ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದ್ದು ಕಾರ್ಯಕರ್ತರು ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡು ಅವಕಾಶದ ಸದುಪಯೋಗ ಪಡೆದುಕೊಳ್ಳುವುದು ಅವಶ್ಯಕ. ನಿಗಧಿತ ಮೀಸಲಾತಿಯಂತೆ ಆಯಾ ವಾರ್ಡ್‌ಗಳಲ್ಲಿ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಹಾಗೂ ಪರಿಣಾಮಕಾರಿ ಚುನಾವಣಾ ಕಾರ್ಯತಂತ್ರ ರೂಪಿಸುವುದು ಪ್ರಮುಖ್ಯತೆ ಹೊಂದಿದೆ. ಪ್ರತೀ ಮತಗಟ್ಟೆ, ಮಹಾ ಶಕ್ತಿಕೇಂದ್ರ, ಮಂಡಲ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ವಿವಿಧ ಸ್ತರದ ಜನಪ್ರತಿನಿಧಿಗಳು ಕಾರ್ಯಕರ್ತರೊಂದಿಗೆ ಒಂದು ತಂಡವಾಗಿ ತೊಡಗಿಸಿಕೊಂಡು ಗ್ರಾ.ಪಂ. ಚುನಾವಣೆಯಲ್ಲಿ ಪ್ರಚಂಡ ಗೆಲುವಿಗೆ ಕಂಕಣಬದ್ಧರಾಗಬೇಕು ಎಂದರು.
‘ಆಯುಷ್ಮಾನ್ ಭಾರತ್’ ಯೋಜನೆಯಡಿ ನೊಂದಾಯಿತ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-೧೯ ಚಿಕಿತ್ಸೆಯು ಸಂಪೂರ್ಣವಾಗಿ ಉಚಿತವಾಗಿದೆ. ಸಾರ್ವಜನಿಕರು ‘ಆಯುಷ್ಮಾನ್ ಭಾರತ್’ ಯೋಜನೆಯ ನೊಂದಾಯಿತ ಆಸ್ಪತ್ರೆಗಳಲ್ಲೇ ಕೊರೋನಾ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಇತ್ತೀಚೆಗೆ ಕೊರೋನಾ ವಿಚಾರವಾಗಿ ಆಧಾರ ರಹಿತ ಆರೋಪಗಳು ಕೇಳಿಬರುತ್ತಿವೆ. ಇವೆಲ್ಲವೂ ಸತ್ಯಕ್ಕೆ ದೂರವಾಗಿದ್ದು ಜನತೆ ವದಂತಿಗಳಿಗೆ ಕಿವಿಗೊಡದೆ ಸರಕಾರದ ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವುದು ಇಂದಿನ ಅಗತ್ಯತೆಯಾಗಿದೆ. ಪ್ರತೀ ಗ್ರಾ.ಪಂ., ತಾ.ಪಂ., ಜಿ.ಪಂ. ಮಟ್ಟದಲ್ಲಿ ಕಾಲಕಾಲಕ್ಕೆ ಕೊರೋನಾ ಕಾರ್ಯಪಡೆಯ ಸಭೆಗಳನ್ನು ನಡೆಸಿ ಅಗತ್ಯ ತುರ್ತು ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಅವಶ್ಯಕ. ಕೊರೋನಾ ವಾರಿಯರ್ಸ್‌ಗಳಿಗೆ ಸಹಕರಿಸುವ ಜೊತೆಗೆ ಸ್ವಯಂ ಜಾಗೃತಿ ಹಾಗೂ ಆರೋಗ್ಯ ಸುರಕ್ಷಾ ನಿಯಮಗಳನ್ನು ಪಾಲಿಸುವ ಮೂಲಕ ಕೊರೋನಾ ಸಂಕಷ್ಟದಿಂದ ಪಾರಾಗೋಣ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ ರಾಜ್ಯ ಮಟ್ಟದ ವಿವಿಧ ಮೋರ್ಚಾಗಳಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಅಭಿನಂದಿಸಿದರು. ಕೊರೋನಾ ಬಗ್ಗೆ ವಿರೋಧ ಪಕ್ಷಗಳ ಆರೋಪಗಳಲ್ಲಿ ಹುರುಳಿಲ. ವೈದ್ಯಕೀಯ ಚಿಕಿತ್ಸೆಯ ನಿಯಮದಂತೆ ಕೊರೋನಾ ರ್‍ಯಾಪಿಡ್ ಟೆಸ್ಟ್, ಲ್ಯಾಬ್ ಟೆಸ್ಟ್ ಇತ್ಯಾದಿಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಯಾವುದೇ ತಪ್ಪು ಕಲ್ಪನೆ ಅನಗತ್ಯ. ಕೊರೋನಾ ಪಾಸಿಟಿವ್ ಚಿಕಿತ್ಸೆಯ ಬಗ್ಗೆ ದಿನ ಒಂದಕ್ಕೆ ಬೆಡ್ ಚಾರ್ಜ್ ರೂ.೫,೨೦೦ ಹಾಗೂ ವೆಂಟಿಲೇಟರ್ ಸಹಿತ ಬೆಡ್ ಚಾರ್ಜ್ ರೂ.೧೦,೦೦೦ವನ್ನು ರಾಜ್ಯ ಸರಕಾರವೇ ಭರಿಸುತ್ತಿದೆ. ಕೊರೋನಾ ಸಂಬಂಧಪಟ್ಟಂತೆ ವೈದ್ಯರ ಹಾಗೂ ಕೊರೋನಾ ವಾರಿಯರ್ಸ್‌ಗಳ ಮಾನಸಿಕ ಸ್ಥೈರ್ಯ ಕುಗ್ಗದಂತೆ ಸಾರ್ವಜನಿಕರು ಸಹಕರಿಸಬೇಕಾಗಿದೆ.
ಮುಂಬರಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪ್ರತೀ ಬೂತ್‌ಗಳಿಗೆ ಚೈತನ್ಯ ತುಂಬಿ ಸಾಮೂಹಿಕ ಪ್ರಯತ್ನದ ಮೂಲಕ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಲು ಶ್ರಮವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಮೋರ್ಚಾ- ಮಂಡಲಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮನೋಹರ್ ಎಸ್. ಕಲ್ಮಾಡಿ ಸ್ವಾಗತಿಸಿ, ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.