ಶಾಸಕರ ಮೇಲೆ ದಾಳಿ ಯತ್ನ- ಸಮಗ್ರ ತನಿಖೆಗೆ ಗೃಹ ಸಚಿವರು ಸೂಚನೆ ನೀಡಬೇಕು: ಶ್ರೀಶ ನಾಯಕ್
ಉಡುಪಿ ಅ.14 (ಉಡುಪಿ ಟೈಮ್ಸ್ ವರದಿ): ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ತಲವಾರ್ ದಾಳಿಗೆ ಯತ್ನ ನಡೆಸಿರುವ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಗೃಹ ಸಚಿವರು ಸೂಚನೆ ನೀಡಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್ ಅವರು ಆಗ್ರಹಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕ ಹರೀಶ್ ಪೂಂಜಾ ಅವರ ತಾಕತ್ತು ಏನು ಎಂದು ಮನೆ ಮನೆಗೆ ಗೊತ್ತಿದೆ. ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಹಿಂದುತ್ವದ ಅಚಲ ಧೋರಣೆಯನ್ನು ಸಹಿಸದ ಕಿಡಿಗೆಡಿಗಳ ಕೃತ್ಯವನ್ನು ಮಟ್ಟಹಾಕಲು ಗೊತ್ತಿದೆ ಎಂದು ತಿಳಿಸಿದರು.
ನಾನು ಉಡುಪಿ ಯುವಮೋರ್ಚಾ ಜಿಲ್ಲಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮಂಗಳೂರು ಯುವಮೋರ್ಚಾ ಅಧ್ಯಕ್ಷರಾಗಿದ್ದ ಪೂಂಜಾ ಅವರು ಯುವ ಕಾರ್ಯಕರ್ತರನ್ನು ಪಕ್ಷ ಸಂಘಟನೆಯನ್ನು ತೊಡಗಸಿಕೊಳ್ಳುವಂತೆ ಮಾಡಿರುವ ಶ್ರಮ ಶ್ಲಾಘನೀಯವಾಗಿತ್ತು.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸಹಿತ ಇಡೀ ರಾಜ್ಯದ ಜನತೆ ಅವರೊಂದಿಗಿದೆ. ದುಷ್ಕರ್ಮಿಗಳ ಈ ತಲವಾರು ಬೆದರಿಕೆಗೆಲ್ಲ ಹೆದರುವವರಲ್ಲ. ಈ ಪ್ರಕರಣದ ಬಗ್ಗೆ ತನಿಖೆ ಆಗಬೇಕೆಂದು ಶ್ರೀಶ ನಾಯಕ್ ಆಗ್ರಹಿಸಿದ್ದಾರೆ.
ಗೃಹ ಸಚಿವರು ಪೊಲೀಸ್ ಇಲಾಖೆಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆದೇಶ ನೀಡಬೇಕು ಎಂದು ಮನವಿ ಮಾಡಿಕೊಂಡರು.