ವಿಟ್ಲಪಿಂಡಿ ಆಚರಣೆ: ಜಿಲ್ಲಾಡಳಿತದ ಜೊತೆ ಚರ್ಚೆ- ಪರ್ಯಾಯಶ್ರೀ

ಉಡುಪಿ: ಸೆ. 11ರಂದು ಕೃಷ್ಣಮಠದಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿ ಮಠದ ಸಂಪ್ರದಾಯದಂತೆ ಸರಳವಾಗಿ ನಡೆಯಲಿದೆ. ವಿಟ್ಲಪಿಂಡಿ ಉತ್ಸವ ಜಿಲ್ಲಾಡಳಿತದ ನಿಯಮಗಳಂತೆ ನಡೆಯಲಿದೆ’ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು.

ಮಠದಲ್ಲಿ ಸೋಮವಾರ ಮಾಧ್ಯಮದ ಜತೆ ಮಾತನಾಡಿದ ಶ್ರೀಗಳು, ‘ಕೃಷ್ಣ ಜನ್ಮಾಷ್ಟಮಿಯಲ್ಲಿ ಭಕ್ತರಿಗೆ ಭಾಗವಹಿಸಲು ಅವಕಾಶ ನೀಡಬೇಕು ಎಂಬ ಬಯಕೆ ಇದ್ದರೂ ಕೊರೊನಾ ವೈರಸ್‌ ಸಮಸ್ಯೆಯಿಂದ ಸಾಧ್ಯವಾಗುತ್ತಿಲ್ಲ . ಈ ವರ್ಷ ಸರಳವಾಗಿ ಮಠದ ಸಂಪ್ರದಾಯದಂತೆ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ನಡೆಯಲಿವೆ’ ಎಂದರು.

‘ಅಂದು ರಾತ್ರಿ 12.16ಕ್ಕೆ ಅರ್ಘ್ಯ ಪ್ರಧಾನ ನಡೆಯಲಿದೆ. ಜನ್ಮಾಷ್ಟಮಿಯ ಮುಖ್ಯ ಧಾರ್ಮಿಕ ವಿಧಿವಿಧಾನಗಳು ಮಠದ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರವಾಗಲಿದ್ದು, ಭಕ್ತರು ಮನೆಯಲ್ಲಿಯೇ ಇದ್ದು ವೀಕ್ಷಿಸಬೇಕು’ ಎಂದು ಸ್ವಾಮೀಜಿ ಹೇಳಿದರು.

ವಿಟ್ಲಪಿಂಡಿ ಉತ್ಸವ ಕೂಡ ಅಂತರ ಕಾಯ್ದುಕೊಂಡು ಜಿಲ್ಲಾಡಳಿತ ನಿಯಮಗಳಿಗೊಳಪಟ್ಟು ನಡೆಯಲಿದೆ. ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮುದ್ದು ಕೃಷ್ಣ ಸ್ಪರ್ಧೆಯೂ ಸರಳವಾಗಿ ನಡೆಯಲಿದೆ ಎಂದರು.

ಕೊರೊನಾ ವ್ಯಾಪಾಕವಾಗಿರುವ ಸಮಯದಲ್ಲಿ ಉತ್ಸವಗಳಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅವಕಾಶ ನೀಡಿದರೆ ಸೋಂಕು ಹೆಚ್ಚುವ ಸಾದ್ಯತೆಗಳಿರುತ್ತವೆ. ಇಷ್ಟು ದಿವಸ ಕಠಿಣ ನಿರ್ಬಂಧಗಳನ್ನು ಹಾಕಿ, ಈಗ ಸಡಿಲಿಸುವುದು ಸರಿಯಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಿರುವುದು ಅನಿವಾರ್ಯ ಎಂದರು.

ಸಾಲ ಅನಿವಾರ್ಯ: ಕೊರೊನಾದಿಂದ ದೊಡ್ಡ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ತಿರುಪತಿ ದೇವಸ್ಥಾನ ಕೂಡ ಮೂಲನಿಧಿ ಬಳಸಿಕೊಳ್ಳುತ್ತಿದೆ. ಕೃಷ್ಣಮಠ ಕೂಡ ಆರ್ಥಿಕ ತೊಂದರೆಯಿಂದ ಹೊರತಾಗಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ಮಠಕ್ಕೆ ಬರುತ್ತಿದ್ದ ಆದಾಯ ಕುಸಿದಿರುವುದರಿಂದ ಮಠದ ನಿರ್ವಹಣೆಗೆ ಸಾಲ ಪಡೆಯಲಾಗುತ್ತಿದೆ ಎಂದು ಸ್ವಾಮೀಜಿ ತಿಳಿಸಿದರು.

‘ಸಿಬ್ಬಂದಿ ವೇತನ, ಊಟ, ನಿರ್ವಹಣೆ ಸೇರಿ ಪ್ರತಿದಿನ ₹ 1.25 ಲಕ್ಷ ವೆಚ್ಚವಾಗುತ್ತಿದೆ. ಮಠದಲ್ಲಿ ಹಲವರು ಕೆಲಸ ಮಾಡುತ್ತಿದ್ದಾರೆ. ಮಠದ ನಿರ್ವಹಣೆಗೆ ಹಣದ ಅವಶ್ಯಕತೆ ಇದ್ದ ಕಾರಣ ಸಾಲ ಪಡೆಯಲಾಗಿದೆ. ಹಾಗೆಂದು ಮಠದಲ್ಲಿ ಹಣವೇ ಇಲ್ಲ; ಸಾಮಾಜಿಕ ಕಾರ್ಯಗಳು ನಿಂತುಹೋಗಲಿವೆ ಎಂದಲ್ಲ. ಮಠದ ಆಸ್ತಿ, ಮೂಲನಿಧಿ ಇದ್ದು, ಭವಿಷ್ಯದ ದೃಷ್ಟಿಯಿಂದ ಸದ್ಯ ಬಳಸಿಕೊಳ್ಳುತ್ತಿಲ್ಲ’ ಎಂದು ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಮಠದ ವ್ಯವಸ್ಥಾಪಕ ಗೋವಿಂದರಾಜು ಇದ್ದರು.

‘ಲಾಕ್‌ಡೌನ್ ಸಂದರ್ಭ ಸರ್ಕಾರಕ್ಕೆ ಮಠದಿಂದ ಆರ್ಥಿಕ ನೆರವು ನೀಡಲಾಗಿದೆ. ಈಗ ಮಠಕ್ಕೆ ಸರ್ಕಾರದಿಂದ ಆರ್ಥಿಕ ನೆರವು ಕೇಳುವುದು ಸರಿಯಲ್ಲ. ಸ್ವಾವಲಂಬಿಯಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಮಠ ಮಾತ್ರವಲ್ಲ ಸಾರ್ವಜನಿಕರು ಕೂಡ ಸರ್ಕಾರದಿಂದ ನೆರವು ಅಪೇಕ್ಷಿಸುವುದು ಸರಿಯಲ್ಲ ಎಂಬುದು ವೈಯಕ್ತಿಕ ಅಭಿಪ್ರಾಯ’ ಎಂದು ಶ್ರೀಗಳು ಹೇಳಿದರು. 

Leave a Reply

Your email address will not be published. Required fields are marked *

error: Content is protected !!