ಬ್ರಹ್ಮಾವರ: ಆಕಾಶವಾಣಿ ಕೇಂದ್ರದ 20 ಎಕರೆ ಜಾಗ ಸರಕಾರಿ ಕಚೇರಿಗಳ ನಿರ್ಮಾಣಕ್ಕೆ ಬಿಟ್ಟು ಕೊಡಲಿ

ಉಡುಪಿ, ಅ.14: ಬ್ರಹ್ಮಾವರದಲ್ಲಿರುವ ಮಂಗಳೂರು ಆಕಾಶವಾಣಿ ಮರುಪ್ರಸರಣ ಕೇಂದ್ರದ ಹಾಳುಬಿದ್ದ 20 ಎಕರೆ ಜಾಗವನ್ನು ಬ್ರಹ್ಮಾವರ ತಾಲೂಕಿನ ಸರಕಾರಿ ಕಚೇರಿಗಳ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು ಎಂದು ಬ್ರಹ್ಮಾವರ ಫೌಂಡೇಷನ್‍ನ ಆಡಳಿತ ಟ್ರಸ್ಟಿ ಬಿ.ಗೋವಿಂದರಾಜ್ ಹೆಗ್ಡೆ ಅವರು ಸಲಹೆ ನೀಡಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ರಹ್ಮಾವರ ತಾಲೂಕು ರಚನೆಯಾಗಿ ಐದು ವರ್ಷಗಳಾದರೂ ಹೆಚ್ಚಿನ ಸರಕಾರಿ ಕಚೇರಿಗಳಿಗೆ ಇನ್ನೂ ಜಾಗ ಸಿಕ್ಕಿಲ್ಲ. ತಾಲೂಕು ಪಂಚಾಯತ್ ಕಚೇರಿ, ನ್ಯಾಯಾಲಯ ಸಂಕೀರ್ಣ, ಉಪಖಜಾನೆ, ಅಬಕಾರಿ ಸೇರಿದಂತೆ 17ಕ್ಕೂ ಅಧಿಕ ಇಲಾಖಾ ಕಚೇರಿಗಳಿಗೆ ಸೂಕ್ತ ಸ್ಥಳವನ್ನು ಹುಡುಕಲಾಗುತ್ತಿದೆ. ಇದೀಗ ಈ ಎಲ್ಲಾ ಕಚೇರಿಗಳಿಗೂ ಒಂದೇ ಕಡೆಯಲ್ಲಿ ಅವಕಾಶ ಲಭ್ಯವಾಗುವಂತೆ, ನಗರದ ಕೇಂದ್ರ ಭಾಗದಲ್ಲಿ ಆಕಾಶವಾಣಿಗೆ ಸೇರಿದ 21.72 ಎಕರೆ ಪ್ರದೇಶವಿದ್ದು, ಇದರಲ್ಲಿ ಆಕಾಶವಾಣಿ ಕೇವಲ ಒಂದೂವರೆ ಎಕರೆ ಜಮೀನನ್ನು ಮಾತ್ರ ಬಳಕೆ ಮಾಡಿಕೊಂಡಿದೆ. ಉಳಿದ ಸುಮಾರು 20ಎಕರೆಯಷ್ಟು ಪ್ರದೇಶವನ್ನು ಬಿಟ್ಟುಕೊಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಸಾಧ್ಯವಿದೆ ಎಂದು ತಿಳಿಸಿದರು.

ಬ್ರಹ್ಮಾವರದಲ್ಲಿ 1976 ರಲ್ಲಿ ಮಂಗಳೂರು ಆಕಾಶವಾಣಿ ಮರುಪ್ರಸರಣ ಕೇಂದ್ರ ಸ್ಥಾಪನೆಗಾಗಿ ಬಿಟ್ಟುಕೊಡಲಾದ ವಾರಂಬಳ್ಳಿ ಗ್ರಾಮ ವ್ಯಾಪ್ತಿಯ ಒಟ್ಟು 22.96 ಎಕರೆ ಜಾಗದಲ್ಲಿ ಈಗ, ಸುಮಾರು 20 ಎಕರೆಯಷ್ಟು  ಪ್ರದೇಶ ಯಾವುದೇ ರೀತಿಯಲ್ಲಿ ಬಳಕೆಗೆ ಬರದೇ ಸಂಪೂರ್ಣವಾಗಿ ಹಾಳುಬಿದ್ದಿದೆ. ಈ ಜಾಗವನ್ನು ತಾಲೂಕು ಕೇಂದ್ರವಾಗಿರುವ ಬ್ರಹ್ಮಾವರದಲ್ಲಿ ಅಗತ್ಯ ಸರಕಾರಿ ಕಚೇರಿಗಳ ನಿರ್ಮಾಣಕ್ಕಾಗಿ ಬಿಟ್ಟುಕೊಡುವಂತೆ ರಾಜ್ಯ ಸರಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ಜಾಗದಲ್ಲಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗೆಂದು ಸ್ವಲ್ಪ ಜಾಗ ಬಿಟ್ಟ ಬಳಿಕ 21.72ಎಕರೆ ಪ್ರದೇಶ ಆಕಾಶವಾಣಿ ವಶದಲ್ಲಿದೆ. ಈ ಜಾಗದಲ್ಲಿ ಈಗ ಪೆÇದೆ, ಹುಲ್ಲು, ಕುರುಚಲು ಕಾಡು ಬೆಳೆದು ಪಾಳುಬಿದ್ದಿದೆ. ಇದನ್ನು ತಾಲೂಕು ಕೇಂದ್ರದ ಅಗತ್ಯ ಸರಕಾರಿ ಕಚೇರಿಗಳ ನಿರ್ಮಾಣಕ್ಕೆ ಸದ್ಭಳಕೆ ಮಾಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ಆಕಾಶವಾಣಿ ಕೇಂದ್ರಕ್ಕೆ ಇಷ್ಟೊಂದು ಜಾಗದ ಅಗತ್ಯ ಖಂಡಿತ ಇಲ್ಲ. ರಾಜ್ಯದ ಉಳಿದ ಆಕಾಶವಾಣಿ ಕೇಂದ್ರಗಳಿಗಿರುವಂತೆ 2ರಿಂದ 3 ಎಕರೆ ಜಾಗವನ್ನು ಆಕಾಶವಾಣಿಗೆ ಬಿಟ್ಟು, ಉಳಿದ ಜಾಗವನ್ನು ರಾಜ್ಯ ಸರಕಾರದ ಕಂದಾಯ ಇಲಾಖೆ ಸುಪರ್ದಿಗೆ ಪಡೆದರೆ ಬ್ರಹ್ಮಾವರ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂಬುದು ಸ್ಥಳೀಯರ ವಾದವಾಗಿದೆ ಎಂದು ಅವರು ತಿಳಿಸಿದರು.

ಬ್ರಹ್ಮಾವರ ಆಕಾಶವಾಣಿ ಮರುಪ್ರಸರಣ ಕೇಂದ್ರದ ಸಾಮಥ್ರ್ಯ 20 ಕೆಡಬ್ಲು ಆಗಿದ್ದು, 2015ರ ಎಪ್ರಿಲ್ ತಿಂಗಳಲ್ಲಿ ಅದರ ಎರಡು ಆ್ಯಂಟೆನಾಗಳು ಬಿದ್ದ ಬಳಿಕ ಅದರ ಪ್ರಸರಣ ಸಾಮಥ್ರ್ಯ ಈಗ 4ಕೆಡಬ್ಲ್ಯುಗೆ ಕುಸಿದಿದೆ. ಏಳು ವರ್ಷಗಳ ಹಿಂದೆ ಬಿದ್ದುಹೋದ ಆ್ಯಂಟೆನಾಗಳ ರಿಪೇರಿ ಅಸಾಧ್ಯವೆಂದು ಹೇಳಲಾಗಿದೆ. ಹೀಗಾಗಿ ಮಂಗಳೂರಿನಲ್ಲಿರುವಂತೆ ಬ್ರಹ್ಮಾವರದಲ್ಲೂ ಎಫ್.ಎಂ ಕೇಂದ್ರವನ್ನು ಪ್ರಾರಂಭಿಸಿ, ಅದಕ್ಕೆ ಅಗತ್ಯವಿಲ್ಲದ 20 ಎಕರೆ ಜಾಗವನ್ನು ರಾಜ್ಯ ಸರಕಾರಕ್ಕೆ ಬಿಟ್ಟುಕೊಡುವಂತೆ ಕೇಳಿ ಸೂಕ್ತ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸುವಂತೆ ನಾವು ಮನವಿ ಮಾಡುತ್ತೇವೆ ಎಂದರು.

ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ 52 ಗ್ರಾಮಗಳಿದ್ದು, 27 ಗ್ರಾಮ ಪಂಚಾಯತ್ ಗಳಿವೆ. ಸುಮಾರು 1,31,203 ಮಂದಿ ಜನಸಂಖ್ಯೆ ಇದೆ. ಇಷ್ಟೊಂದು ದೊಡ್ಡ ತಾಲೂಕಿನ ಜನರಿಗೆ ಸರಕಾರಿ ಕಚೇರಿಗಳು ಅಗತ್ಯ ವಾಗಿಬೇಕಾಗಿದೆ. ತಾಲೂಕು ಘೋಷಣೆಗಾಗಿ ಐದು ವರ್ಷಗಳಾದರೂ ಜನರು ಈಗಲೂ ಅಗತ್ಯ ಕಾರ್ಯಗಳಿಗೆ ಅಲೆಯಬೇಕಾಗಿದೆ. ಅವರಿಗೆ ಎಲ್ಲಾ ಕಚೇರಿಗಳು ಕೇಂದ್ರ ಭಾಗದಲ್ಲಿ ಒಟ್ಟಾಗಿ ದೊರೆತರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆ. ಆದುದರಿಂದ ರಾಜ್ಯ ಸರಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಹಾಗೂ ಇದೇ ವೇಳೆ ಈಗಾಗಲೇ 2015 ರಲ್ಲಿ ಮೈಸೂರಿನಲ್ಲಿದ್ದ 15 ಎಕರೆ ಕೇಂದ್ರ ಸರಕಾರದ ಸ್ವಾಧೀನದಲ್ಲಿದ್ದ ಜಾಗವನ್ನು ರಾಜ್ಯ ಸರಕಾರದ ಕೋರಿಕೆಯ ಮೇರೆಗೆ ಮೈಸೂರು ಜಿಲ್ಲೆಯ ಜಿಲ್ಲಾ ಸಂಕೀರ್ಣ ಕಟ್ಟಡದ ನಿರ್ಮಾಣಕ್ಕೆ ಬಿಟ್ಟುಕೊಟ್ಟಿದ್ದು, ಅಲ್ಲೀಗ ಜಿಲ್ಲಾಧಿಕಾರಿ ಕಚೇರಿ ತಲೆ ಎತ್ತಿದೆ ಎಂದವರು ಉದಾಹರಣೆ ನೀಡಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರದ ನ್ಯಾಯವಾದಿ ನಾಗರಾಜ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಧಾಕರ ಶೆಟ್ಟಿ ಮೈರ್ಮಾಡಿ, ಬಿ.ಎನ್.ಶಂಕರ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಸುಧಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!