ಉಡುಪಿ: ರೈಲಿನಲ್ಲಿ ಟಿಕೆಟ್ ಇಲ್ಲದೆ‌ ಪ್ರಯಾಣ ಮಾಡಿದ‌ ಐವರಿಗೆ ಶಿಕ್ಷೆ ಪ್ರಕಟ

ಉಡುಪಿ, ಅ.13 : ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿದ 5 ಮಂದಿ ಪ್ರಯಾಣಿಕರಿಗೆ 1 ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನಿಂದ ಮುಂಬೈಗೆ ತೆರಳುತಿದ್ದ ನಂ.12620 ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತಿದ್ದ ಕೇರಳದ ಕಲ್ಲಿಕೋಟೆ ಜಿಲ್ಲೆಯ ಥರಿಯಾದ್ ಕಟ್ಟಿಪಾರಾದ ಜುನೈದ್ (24), ಸುಜಿತ್ (23), ವಿಷ್ಣು (24), ಯೂನಿಸ್ (24) ಹಾಗೂ ಮಿಸ್ಬಾ (24) ಎಂದು ಶಿಕ್ಷೆಗೊಳಗಾದ ಯುವಕರು.

ಈ ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯ ತಲಾ 1100 ರೂ. ದಂಡ ಹಾಗೂ ಒಂದು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿದೆ.ಹಾಗೂ ದಂಡ ಪಾವತಿಸದಿದ್ದರೆ ಇನ್ನೂ ಒಂದು ತಿಂಗಳು ಜೈಲಿನಲ್ಲಿರುವಂತೆ ಸೂಚಿಸಿ ತೀರ್ಪು ನೀಡಿದೆ.

ಐವರು ಯುವಕರು ಗೋವಾಕ್ಕೆ ಪ್ರವಾಸ ಕೈಗೊಂಡಿದ್ದು, ಮಧ್ಯಾಹ್ನದ ರೈಲಿನಲ್ಲಿ ಮಂಗಳೂರಿನಿಂದ ಟಿಕೇಟ್ ಇಲ್ಲದೇ ಪ್ರಯಾಣಿಸುತಿದ್ದರು. ಈ ವೇಳೆ ಟಿಕೆಟ್ ಕೇಳಿದ ಟಿಸಿಗೆ ದಬಾಯಿಸಿದಲ್ಲದೇ ರೈಲಿನಲ್ಲಿ ನ್ಯೂಸೆನ್ಸ್ ಸೃಷ್ಟಿದ್ದರೆಂದು ದೂರು ಬಂದ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸ್ ಪಡೆಯ (ಆರ್‌ಪಿಎಫ್) ಎಎಸ್‌ಐ ಸುಧೀರ್ ಶೆಟ್ಟಿ ಹಾಗೂ ಮಹಿಳಾ ಕಾನ್‌ಸ್ಟೇಬಲ್ ಝೀನಾ ಪಿಂಟೊ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಐವರನ್ನು ವಶಕ್ಕೆ ಪಡೆದುಕೊಂಡರು.

ಬಳಿಕ ವಿಚಾರಣೆಗಾಗಿ ಉಡುಪಿ ಆರ್‌ಪಿಎಫ್ ಕಚೇರಿಗೆ ಕರೆದುಕೊಂಡು ಹೋಗಿದ್ದರು. ಇಲ್ಲಿಯೂ ಕೂಡಾ ಯುವಕರು ಮತ್ತಷ್ಟು ಕೆಟ್ಟದ್ದಾಗಿ ವರ್ತಿಸಿದ್ದು, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕೆಟ್ಟ ಪದಗಳಿಂದ ಹರಿಹಾಯ್ದರೆಂದು ಹೇಳಲಾಗಿದೆ. ಇದರಿಂದ ಪೊಲೀಸರು ಐವರ ವಿರುದ್ಧ ಆರ್‌ಸಿ ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಿದ್ದಲ್ಲದೇ ಎಲ್ಲರನ್ನೂ ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.

ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಐವರ ವಿರುದ್ಧ ಟಿಕೇಟ್ ರಹಿತ ಪ್ರಯಾಣಕ್ಕಾಗಿ ತಲಾ 1000ರೂ. ದಂಡ ಹಾಗೂ ಕೆಟ್ಟ ವರ್ತನೆಗಾಗಿ ತಲಾ 100 ರೂ.ನಂತೆ ದಂಡ ವಿಧಿಸಿದರು. ಆರೋಪಿಗಳು ದಂಡ ಕಟ್ಟಲು ವಿಫಲರಾಗಿದ್ದರಿಂದ, ಎಲ್ಲರನ್ನೂ ತಪ್ಪಿತಸ್ಥರೆಂದು ಘೋಷಿಸಿದ ನ್ಯಾಯಾಲಯ  30ದಿನಗಳ (ಒಂದು ತಿಂಗಳ) ಸಾದಾ ಜೈಲು ಶಿಕ್ಷೆ ಹಾಗೂ ತಲಾ 1100ರೂ. ದಂಡ ವಿಧಿಸಿ ತೀರ್ಪು ನೀಡಿತು. ಒಂದು ತಿಂಗಳೊಳಗೆ ದಂಡ ಪಾವತಿಸಲು ವಿಫಲರಾದರೆ, ಜೈಲು ಶಿಕ್ಷೆಯನ್ನು ಇನ್ನು ಒಂದು ತಿಂಗಳಿಗೆ ವಿಸ್ತರಿಸುವಂತೆ ಸೂಚನೆ ನೀಡಿತು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!