ದುರ್ಗಾ ದೌಡ್ ನಲ್ಲಿ ತಲವಾರು ಪ್ರದರ್ಶನ, ಪ್ರಚೋದನಕಾರಿ ಭಾಷಣ- ದೂರು ದಾಖಲು
ಉಡುಪಿ, ಅ.13 : ನಗರದಲ್ಲಿ ಅ.2ರಂದು ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ ಹಾಗೂ ಸಾರ್ವಜನಿಕ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿರುವ ವಿರುದ್ಧ ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಈ ಬಗ್ಗೆ ಹುಸೈನ್ ಎಂಬವರು ನೀಡಿರುವ ದೂರಿನಲ್ಲಿ, ಅ.2ರಂದು ಮಧ್ಯಾಹ್ನ 3.30ಕ್ಕೆ ಕಡಿಯಾಳಿಯಿಂದ ಹೊರಟು ಉಡುಪಿ ನಗರದಲ್ಲಿ ಸಾಗಿದ ದುರ್ಗಾ ದೌಡ್ ಮೆರವಣಿಗೆಯಲ್ಲಿ ಸುಮಾರು 10-15 ಮಂದಿಯ ಗುಂಪು ಅಕ್ರಮವಾಗಿ ಮಾರಕಾಸ್ತ್ರವಾದ ತಲವಾರು ಪ್ರದರ್ಶಿಸಿದ್ದು, ತ್ರೀವೇಣಿ ಸರ್ಕಲ್ ಬಳಿ ಆಗಮಿಸಿ ಮೆರವಣಿಗೆಯಲ್ಲಿ ತಲವಾರು ಹಿಡಿದು ತಾಲೀಮು ನಡೆಸಿ ಭಯ ಹುಟ್ಟಿಸುವ ದುಷ್ಕøತ್ಯ ಎಸಗಲಾಗಿದೆ ಎಂದು ತಿಳಿಸಿದ್ದಾರೆ. ಅದರಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಐಎಫ್‍ಸಿ 1860(ಯು/ಎಸ್-143, 149), ಆರ್ಮ್ ಆ್ಯಕ್ಟ್ 1959(ಯು/ಎಸ್-27) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾಗೂ ಅದೇ ದಿನ ಸಂಜೆ 6 ಗಂಟೆ ಉಡುಪಿ ಶ್ರೀಕೃಷ್ಣ ಮಠದ ಪಾಕಿರ್ಂಗ್ ಸ್ಥಳದ ಎದುರು ಇರುವ ಖಾಸಗಿ ಸ್ಥಳದಲ್ಲಿ ನಡೆದ ದುರ್ಗಾ ದೌಡ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹಾಗೂ ಅತಿಥಿಯಾಗಿ ಭಾಗವಹಿಸಿದ ಕಾಜಲ್ ಹಿಂದೂಸ್ಥಾನಿ ಅವರು ಹಿಂದುಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿ, ಹಿಂದುಗಳ ಮನೆಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟು ಪೂಜೆ ಮಾಡಿ ಅದನ್ನು ಬಳಸಬೇಕು ಹಾಗೂ ಸಣ್ಣ ಸಣ್ಣ ಹೆಣ್ಣು ಮಕ್ಕಳನ್ನು ಮುಸ್ಲಿಂ ಸಮುದಾಯದವರು ಲವ್ ಜಿಹಾದ್ ನಡೆಸಿ ವಂಚಿಸುತ್ತಿದ್ದಾರೆ. ಈ ಲವ್ ಜಿಹಾದ್ ಪ್ರಚೋದನೆಯಾಗಿ ಕಾರ್ಯಚರಿಸುತ್ತಿದೆ ಎಂದು ಒಂದು ಸಮುದಾಯವನ್ನು ದೂಷಿಸಿ ಇನ್ನೊಂದು ಧರ್ಮ ದವರೊಂದಿಗೆ ಧ್ವೇಷ ಭಾವನೆ ಹುಟ್ಟುವಂತೆ ಮಾತನಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಶ್ರೀಕಾಂತ್ ಶೆಟ್ಟಿ ಹಾಗೂ ಕಾಜಲ್ ಹಿಂದೂಸ್ಥಾನಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 1850(ಯು/ಎಸ್-153ಎ, 34) ಯಂತೆ ಪ್ರಕರಣ ದಾಖಲಾಗಿದೆ.