ಇಬ್ಬರು ಉಗ್ರರ ಸಾವಿಗೆ ಕಾರಣವಾಗಿದ್ದ ಭಾರತೀಯ ಸೇನೆಯ ಝೂಮ್’ ಶ್ವಾನ ಇನ್ನಿಲ್ಲ
ನವದೆಹಲಿ, ಅ.13: ಇಬ್ಬರು ಉಗ್ರರ ಸಾವಿಗೆ ಕಾರಣವಾಗಿದ್ದ ಭಾರತೀಯ ಸೇನೆಯ ಝೂಮ್’ ಶ್ವಾನ ಇಂದು ಮಧ್ಯಾಹ್ನ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಭಾನುವಾರ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ನಲ್ಲಿ ಮನೆಯೊಂದರಲ್ಲಿ ಉಗ್ರರ ಇರುವಿಕೆ ಪತ್ತೆ ಹಚ್ಚಿ ಒಳಗೆ ಹೋಗಿ ದಾಳಿ ಮಾಡಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಉಗ್ರರಿಂದ ಎರಡು ಗುಂಡುಗಳನ್ನು ಹೊಡೆಸಿಕೊಂಡ `ಝೂಮ್ ‘ಗೆ ತೀವ್ರವಾದ ಗಾಯವಾಗಿತ್ತು. ಆದರೂ ಹಿಂದೆ ಸರಿಯದ ಝೂಮ್ ಹೋರಾಡುತ್ತಲೇ ತನ್ನ ಕಾರ್ಯವನ್ನು ನಿರ್ವಹಿಸುತ್ತಲೇ ಇತ್ತು. ತೀವ್ರವಾದ ಗಾಯಗಳ ನಡುವೆಯೂ ಕೆಚ್ಚೆದೆಯುಳ್ಳ ಝೂಮ್ ಸೈನಿಕ ತನ್ನ ಕಾರ್ಯವನ್ನು ಮುಂದುವರೆಸಿ, ಕೊನೆಗೆ ಇದು ಇಬ್ಬರು ಭಯೋತ್ಪಾದಕರ ಹತ್ಯೆಗೆ ಕಾರಣವಾಗಿತ್ತು.
ಉಗ್ರರ ಜೊತೆ ಭದ್ರತಾ ಪಡೆಗಳು ಕಾಳಗ ನಡೆಸುವ ವೇಳೆ ಈ ಶ್ವಾನ ತೀವ್ರವಾಗಿ ಗಾಯಗೊಂಡಿತ್ತು. ಉಗ್ರರ ದಾಳಿಯಲ್ಲಿ ಝೂಮ್ ದೇಹ ಹೊಕ್ಕಿದ್ದ ನಾಲ್ಕು ಗುಂಡುಗಳನ್ನು ಹೊರ ತೆಗೆಯಲಾಗಿತ್ತು. ಅದರ ಮುಖ ಮತ್ತು ಹಿಂಭಾಗದ ಬಲಗಾಲಿನ ಮೇಲೆ ಗುಂಡೇಟಿನ ಗಾಯವಾಗಿದ್ದ ಕಾರಣ ಆಪರೇಷನ್ ಮಾಡಲಾಗಿತ್ತು. ಆದರೆ ಇಂದು ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಿಸದೆ ಝೂಮ್ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಝೂಮ್ ಹೆಚ್ಚು ತರಬೇತಿ ಪಡೆದ ನಾಯಿಯಾಗಿದ್ದು, ಉಗ್ರ ಮತ್ತು ಗಟ್ಟಿಯಾದ ಕೋರೆಹಲ್ಲು ಹೊಂದಿತ್ತು. ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ಸೆದೆಬಡಿಯಲು ಇದನ್ನು ತರಬೇತಿ ನೀಡಲಾಗಿತ್ತು. ದಕ್ಷಿಣ ಕಾಶ್ಮೀರದಲ್ಲಿ ಜೂಮ್ ಅನೇಕ ಸಕ್ರಿಯ ಕಾರ್ಯಾಚರಣೆಗಳ ಭಾಗವಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.