ಉದ್ಯೋಗ ಒಪ್ಪಂದಗಳ ಅವಧಿಯ ಮೇಲಿನ ಮಿತಿ ತೆಗೆದುಹಾಕಿದ ಯುಎಇ- ಭಾರತೀಯ ಉದ್ಯೋಗದಾತರಿಗೆ ಅನುಕೂಲ

ಅಬುದಾಬಿ, ಅ.13: ಉದ್ಯೋಗ ಸಂಬಂಧಗಳ ಮೇಲಿನ ಕಾಯಿದೆಯನ್ನು ಯು.ಎ.ಇ.ಯ ಮಾನವ ಸಂಪನ್ಮೂಲ ಇಲಾಖೆಯು ಆಧುನೀಕರಿಸಿದ್ದು, ಇದರಿಂದ ಭಾರತೀಯರಿಗೆ ಅನುಕೂಲವಾಗಬಹುದು ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರಕಟಗೊಂಡಿರುವ ಮಾಧ್ಯಮ ವರದಿ ಪ್ರಕಾರ, ಹೊಸ ಕಾನೂನಿನ ಹಿನ್ನೆಲೆಯಲ್ಲಿ, ಅನಿರ್ದಿಷ್ಟ ಒಪ್ಪಂದಗಳನ್ನು ಸ್ಥಿರ ಅವಧಿಯ ಒಪ್ಪಂದಗಳಿಗೆ ಬದಲಾಯಿಸಲಾಗುತ್ತದೆ. ಈ ಹಿಂದೆ ಕೆಲಸಗಾರರನ್ನು ಮೂರು ವರ್ಷದ ಸ್ಥಿರ ಅವಧಿಯ ಉದ್ಯೋಗ ಒಪ್ಪಂದದ ಅನ್ವಯ ನೇಮಿಸಿಕೊಳ್ಳಲಾಗುತ್ತಿತ್ತು. ಆದರೀಗ ಉದ್ಯೋಗ ಒಪ್ಪಂದಗಳ ಅವಧಿಯ ಮೇಲಿನ ಮಿತಿಯನ್ನು ಯುಎಇ ತೆಗೆದುಹಾಕಿದ್ದು ಈ ಕ್ರಮವು ದೇಶವನ್ನು ‘ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಹೆಚ್ಚು ಸಮತೋಲಿತ’ ಪ್ರದೇಶವಾಗಿ ರೂಪಿಸಿದೆ ಎಂದು ತಿಳಿಸಲಾಗಿದೆ.

ಹೊಸ ತಿದ್ದುಪಡಿಯ ಪ್ರಕಾರ, ಎಲ್ಲಾ ಉದ್ಯೋಗ ಒಪ್ಪಂದಗಳು ನಿರ್ಧಿಷ್ಟ ಅವಧಿಯನ್ನು ಒಳಗೊಂಡಿರಬೇಕು, ಆದರೆ ಅವಧಿಗೆ ಯಾವುದೇ ಮಿತಿಯನ್ನು ಹೇರಲಾಗಿಲ್ಲ. ಆದ್ದರಿಂದ ಉದ್ಯೋಗ ಒಪ್ಪಂದವನ್ನು ನವೀಕರಿಸಬಹುದು. ಹಾಗೂ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ಹೊಂದಿಕೊಳ್ಳುವ(ಫ್ಲೆಕ್ಸಿಬಲ್), ತಾತ್ಕಾಲಿಕ ಅಥವಾ ಅರೆಕಾಲಿಕ ಒಪ್ಪಂದಗಳನ್ನು ಪಡೆಯಲು ಮತ್ತು ಒಂದಕ್ಕಿಂತ ಹೆಚ್ಚು ಉದ್ಯೋಗ ಮಾದರಿಗಳನ್ನು ಸಂಯೋಜಿಸಲು ಅವಕಾಶವಿದೆ ಎನ್ನಲಾಗಿದೆ.

ಈ ಹಿಂದೆ ಉದ್ಯೋಗ ಒಪ್ಪಂದಗಳನ್ನು ಉದ್ಯೋಗಿಯ ವೀಸಾ ಸ್ಥಿತಿ (ಸ್ಟೇಟಸ್)ನೊಂದಿಗೆ ಹೊಂದಿಸಲಾಗುತ್ತಿತ್ತು. ಇದರಿಂದಾಗಿ ಒಪ್ಪಂದಗಳು ಈ ಹಿಂದಿನ ನಿವಾಸ ವೀಸಾದ ವಾಯಿದೆಯಾದ 2 ಅಥವಾ 3 ವರ್ಷಕ್ಕೆ ಸೀಮಿತವಾಗಿರುತ್ತಿತ್ತು. ಆದರೆ ಈಗಿನ ನವೀಕರಣದಿಂದಾಗಿ, ಉದ್ಯೋಗ ಒಪ್ಪಂದವು ಅರ್ಜಿದಾರನ ವೀಸಾ ಸ್ಥಿತಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿರಲು ಸಾಧ್ಯವಾಗಲಿದೆ. ಆದ್ದರಿಂದ ಈ ಮಾರ್ಪಾಡು ಭಾರತೀಯರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಬಹುದು ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!