ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ನಾಲ್ವರು ಪತ್ರಕರ್ತರ ಸಹಿತ 26 ಜನರ ಪರ್ಸ್,ಮೊಬೈಲ್ ಕಳವು
ಕೊಪ್ಪಳ ಅ.13: ಇಷ್ಟು ದಿನ ಮನೆ, ಸಂತೆ, ಜಾತ್ರೆಯಲ್ಲಿ, ಸಾರ್ವಜನಿಕ ಜನನಿಬಿಡ ಪ್ರದೇಶಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರು ಇದೀಗ ರಾಜಕೀಯ ಸಮಾವೇಶವನ್ನು ಕೂಡಾ ಕಳ್ಳತನದ ಅಡ್ಡವಾಗಿ ಬಳಸಿಕೊಳ್ಳಲು ಆರಂಭಿಸಿದ್ದಾರೆ.
ಜಿಲ್ಲೆಯ ಕುಷ್ಟಗಿಯಲ್ಲಿ ನಿನ್ನೆ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಹಣ, ಮೊಬೈಲ್ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ನೂರಾರು ಪೊಲೀಸರು ಇದ್ದರೂ ಸಹ ನಾಲ್ವರು ಪತ್ರಕರ್ತರು ಸೇರಿ 26 ಜನರ ಹಣ, ಮೊಬೈಲ್ ಕಳ್ಳತನವಾಗಿದ್ದು, ಈ ಬಗ್ಗೆ 26 ಜನರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಿಎಸ್ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಹಳಷ್ಟು ಜನಸಂಖ್ಯೆ ಸೇರಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಸಮಾವೇಶಕ್ಕೆ ಆಗಮಿಸಿದ್ದವರ ಹಣ, ಮೊಬೈಲ್ ಕಳ್ಳತನ ಮಾಡಿದ್ದಾರೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.