ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಜಿ.ಮೋಹನ್ ದಾಸ್ ಇನ್ನಿಲ್ಲ

ಉಡುಪಿ:(ಉಡುಪಿಟೈಮ್ಸ್ ವರದಿ) ಬೀಜಿ ಎಂದೇ ಖ್ಯಾತರಾಗಿರುವ ಬಿಜೂರು ಗೋವಿಂದಪ್ಪ ಮೋಹನ್ ದಾಸ್ (70) ಇಂದು ಮಧ್ಯಾಹ್ನ ಹೃದಾಘಾತಕ್ಕೆ ಒಳಗಾಗಿ ಮೃತ ಪಟ್ಟಿದ್ದಾರೆ. ಕಳೆದ ಒಂದು ತಿಂಗಳಿನಿಂದ ಬ್ಯಾಕ್‌ಟೀರಿಯ ಇನ್ಫೇಕ್ಷನ್ ಗೆ ಒಳಗಾಗಿ ಇವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಅವರು 80 ರ ದಶಕದಲ್ಲಿ ಕೊಲ್ಲಿ ರಾಷ್ಟ್ರಕ್ಕೆ ವಲಸೆ ಹೋಗಿ ಅಲ್ಲಿ ಕನ್ನಡದ ಪತಾಕೆಯನ್ನು ಹಾರಿಸಿದ್ದರು. ಇಂದಿನಂತೆ ಮೊಬೈಲ್, ಸಾಮಾಜಿಕ ಜಾಲತಾಣ ಇಲ್ಲದ ದಿನಗಳಲ್ಲಿ ಅವರು ಕನ್ನಡಿಗರನ್ನು ಸಂಘಟಿಸಿ, ಆ ಸಂಘವನ್ನು ಇಂದು ಹೆಮ್ಮರವಾಗಿ ಬೆಳೆಸಿದ ಸಾಧನೆಗೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿತ್ತು. ಔಷಧಿ ಶಾಸ್ತ್ರದ ವಿವಿಧ ಸಂಸ್ಥೆಗಳಲ್ಲಿ 35 ವರ್ಷಗಳಿಂದ ಅವಿರತವಾಗಿ ದುಡಿದ ಅವರು, ಮಣಿಪಾಲ ಫಾರ್ಮಸಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1985 ರಲ್ಲಿ ದುಬೈ ಕರ್ನಾಟಕ ಸಂಘದ ಸಂಸ್ಥಾಪಕರ ಬಳಗ ಸೇರಿ ಮುಂದೆ 1988ರಲ್ಲಿ ಸಂಘಕ್ಕೊಂದು ಸಂವಿಧಾನ ರೂಪಿಸಿದವರು. 1989ರಲ್ಲಿ ಸಂಘದ ಪ್ರಪ್ರಥಮ ಚುನಾಯಿತ ಅಧ್ಯಕ್ಷರಾದರು. 1992–94ರಲ್ಲಿ ಕಾರ್ಯದರ್ಶಿ, 1996-98ರಲ್ಲಿ ಅಧ್ಯಕ್ಷರಾಗಿ, ಯು.ಎ.ಇ ಇಂಡಿಯನ್ ಫಾರ್ಮಾಸೂಟಿಕಲ್ಸ್ ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಅವರ ಸಾಧನೆಗೆ ಶಾರ್ಜಾ ಕರ್ನಾಟಕ ಸಂಘ 2007 ರಲ್ಲಿ ಮಯೂರ ಪ್ರಶಸ್ತಿ, 2002ರಲ್ಲಿ ಮಣಿಪಾಲ ವಿ.ವಿ.ಯು ಅತ್ಯುತ್ತಮ ಪೂರ್ವ ವಿದ್ಯಾರ್ಥಿ ಪ್ರಶಸ್ತಿಯನ್ನು ನೀಡಿದೆ. ವಿದೇಶದಲ್ಲಿದ್ದರೂ, ಕನ್ನಡವನ್ನು ಮರೆಯದೆ, ಕನ್ನಡ ವೆಬ್ಸೈಟ್ ಪತ್ರಿಕೋದ್ಯಮ ಆರಂಭಿಸಿದ ಅವರ ಸಾಧನೆಗೆ ಅಬುಧಾಬಿ ಕರ್ನಾಟಕ ಸಂಘ ಪ್ರಥಮ ದ.ರಾ.ಬೇಂದ್ರೆ ಪ್ರಶಸ್ತಿ ನೀಡಿತ್ತು.

ಕಳೆದ 6 ವರ್ಷಗಳ ಹಿಂದೆ ಸ್ವದೇಶಕ್ಕೆ ಬಂದು ಮಣಿಪಾಲದಲ್ಲಿ ನೆಲೆಸಿರುವ ಬೀಜಿ ಅವರು, ಪತ್ನಿ ಯಶೋದಾ, ಪುತ್ರ ಅಖಿಲ್, ಪುತ್ರಿ ಯಶಸ್ವಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!