ಮಣಿಪಾಲ: ಬಾರ್ ಮ್ಯಾನೇಜರ್‌ಗೆ ನಗರ ಸಭಾ ಸದಸ್ಯೆಯ ಮಗನಿಂದ ಹಲ್ಲೆ
ಮಣಿಪಾಲ: (ಉಡುಪಿ ಟೈಮ್ಸ್ ವರದಿ)ಸರಳಬೆಟ್ಟು ವಾರ್ಡಿನ ನಗರ ಸಭಾ ಸದಸ್ಯೆಯ ಮಗನಿಂದ ಬಾರ್ ಮ್ಯಾನೇಜರ್‌ಗೆ ಬಿಯರ್ ಬಾಟಲಿಯಲ್ಲಿ ಹಲ್ಲೆ ನಡೆಸಿದ ಘಟನೆ ರವಿವಾರ ತಡ ರಾತ್ರಿ ಮಣಿಪಾಲದಲ್ಲಿ ನಡೆದಿದೆ.
ಘಟನೆ ವಿವರ: ನಿನ್ನೆ ರಾತ್ರಿ 12 ಗಂಟೆಗೆ ಆಶ್ಲೇಷ ಬಾರ್ ಬಂದ್ ಮಾಡಿ ಹೊರಗೆ ನಿಂತಿದ್ದ ಮ್ಯಾನೇಜರ್ ಅವಿನಾಶ್ ಪೈ (34) ಬಳಿ ನಾಲ್ಕೈದು ಜನರ ತಂಡವೊಂದು ಬಂದಿದ್ದರು. ಈ ತಂಡವು ಮದ್ಯವನ್ನು ನೀಡುವಂತೆ ಮ್ಯಾನೇಜರ್ ಬಳಿ ಒತ್ತಾಯಿಸಿದ್ದರು. ಆಗ ಮ್ಯಾನೇಜರ್ ಅವಿನಾಶ್ ಬಾರ್ ಬಂದ್ ಮಾಡಿದ್ದಾಗಿ ಹೇಳಿದ್ದು, ಇದಕ್ಕೆ ಒಪ್ಪದ ತಂಡವು ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು.
ತಕ್ಷಣ ಮ್ಯಾನೇಜರ್ ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಸ್ಥಳದಿಂದ ತಂಡವು ಕಾಲ್ಕಿತ್ತಿದ್ದರು. ಪೊಲೀಸರು ಸ್ಥಳದಿಂದ ತೆರಳಿದ ಬಳಿಕ, ಮತ್ತೆ ಬಾರ್ ಕಡೆ ಬಂದ ಯುವಕರ ತಂಡ ಅವಿನಾಶ್ ತಲೆಗೆ ಬಿಯರ್ ಬಾಟಲಿಯಲ್ಲಿ ಹೊಡೆದಿದ್ದಾರೆ ಎನ್ನಲಾಗಿದೆ.
ತೀವೃ ರಕ್ತಸ್ರಾವವಾದ ಅವಿನಾಶ್‌ನನ್ನು ಬಾರ್‌ನ ಕಾರ್ಮಿಕರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರ ಸಭಾ ಸದಸ್ಯೆಯ ಮಗ ರಕ್ಷಿತ್ ಮತ್ತು ಆತನ ತಂಡವನ್ನು ಪೊಲೀಸರು ಬಂಧಿಸಲು ಬಲೆ ಬೀಸಿದ್ದಾರೆ.