ಪಕ್ಷವನ್ನು ಕಟ್ಟಿ ಬೆಳೆಸಿದವರನ್ನು ಮೂಲೆಗೆ ತಳ್ಳಿ, ಹೀನಾಯವಾಗಿ ನೋಡುವುದಿಲ್ಲ
ಉಡುಪಿ: ಕಾಂಗ್ರೆಸ್ ಪಕ್ಷಕ್ಕೆ 135 ವರ್ಷಗಳ ಇತಿಹಾಸವಿದೆ. ದೇಶದಾದ್ಯಂತ ತಳಮಟ್ಟದಿಂದ ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಕಾಂಗ್ರೆಸ್. ಹಾಗಾಗಿ ಪಕ್ಷಕ್ಕೆ ಪೂರ್ಣ ಪ್ರಮಾಣದ ರಾಷ್ಟ್ರೀಯ ಅಧ್ಯಕ್ಷರ ನೇಮಕಾತಿ ಬಗ್ಗೆ ಯಾವುದೇ ಗೊಂದಲವಿಲ್ಲ. ಬಿಜೆಪಿಯಂತೆ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯರನ್ನು ಮೂಲೆಗೆ ತಳ್ಳಿ, ಹೀನಾಯವಾಗಿ ಕಾಣುವ ಸಂಸ್ಕೃತಿ ನಮ್ಮದಲ್ಲ.
ಕೊರೋನಾ ಸಂಕಷ್ಟ ಕಾಲದಲ್ಲಿ ಕೊರೋನಾ ಮುಕ್ತ ಮಾಡುವುದೇ ಕಾಂಗ್ರೆಸ್ ಪಕ್ಷದ ಗುರಿಯಾಗಿದೆ. ಆದರೆ ಬಿಜೆಪಿಯ ಕಾಂಗ್ರೆಸ್ ಮುಕ್ತ ಮಾಡುವ ಏಕೈಕ ಗುರಿಯು ಪ್ರಜಾಪ್ರಭುತ್ವ ವಿರೊಧಿಯಾಗಿದೆ. ಕಾಂಗ್ರೆಸ್ ಯಾವಾಗಲೂ ಬಲವಾದ ವಿರೋಧ ಪಕ್ಷ ಇರಬೇಕು ಎನ್ನುವ ಧೋರಣೆ ಹೊಂದಿರುವ ಪಕ್ಷ. ಖರೀದಿ ಮಾಡಿ ಪಕ್ಷಗಳನ್ನು ಮುಕ್ತವನ್ನಾಗಿಸುವ ಯೋಜನೆ ಬಿಜೆಪಿಗೆ ಕರಗತ. ದೇಶದಲ್ಲಿ ಇಂದು ಬಿಜೆಪಿಯಿಂದ ಆಂತರಿಕ ತುರ್ತು ಪರಿಸ್ಥಿತಿ ಹೇರಲಾಗುತ್ತಿದೆ.
ವಿರೋಧ ಪಕ್ಷಗಳನ್ನು, ಪತ್ರಿಕಾ ಮಾಧ್ಯಮಗಳನ್ನು ಐಟಿ ಹಾಗೂ ಸಿಬಿಐ ಸಂಸ್ಥೆಗಳಿಂದ ಬೆದರಿಸಿ ವ್ಯವಸ್ಥಿತವಾಗಿ ತುಳಿಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಎಲ್ಲಾ ಸರಕಾರಿ ಸೌಮ್ಯದ ಸಂಸ್ಥೆಗಳನ್ನು ಖಾಸಗಿಕರಣ ಗೊಳಿಸಲಾಗುತ್ತಿದೆ. ಇದು ಕೇಂದ್ರದ ಅಧಿಕಾರದ ದುರುಪಯೋಗ ಹಾಗೂ ಬಿಜೆಪಿಯ ಸಂಸ್ಕೃತಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಪ್ರತಿಕ್ರಿಯಿಸಿದ್ದಾರೆ.